ಬೆಂಗಳೂರು: ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಷಿಸಿದ್ದಾರೆ. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕಳುಸುತ್ತಿದ್ದೇನೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿದ ಅವರು, ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಪತ್ರ ಕಳಿಸುತ್ತೇನೆ. ಅವರು ಅದನ್ನು ಅಂಗೀಕಾರ ಮಾಡಬಹುದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು. ಕಾಂಗ್ರೆಸ್‌ನ ಕಾರ್ಯಕರ್ತರಿಗೂ ಧನ್ಯವಾದ. ರಾಜ್ಯದ ದೃಷ್ಟಿಯಿಂದ ಹಾಗೂ ಸ್ವಾಭಿಮಾನದ ಕಾರಣಕ್ಕಾಗಿ ಎಂಎಲ್‌ಸಿ ಸ್ಥಾನ ತ್ಯಜಿಸುವ ಹಾಗೂ ಕಾಂಗ್ರೆಸ್ ತೊರೆಯುವ ತೀರ್ಮಾನಕ್ಕೆ ಬಂದಿದ್ದೇನೆ. ಕಾಂಗ್ರೆಸ್‌ನಲ್ಲಿ ಸ್ವಾಭಿಮಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ರಾಹಿಂ ಅಭಿಪ್ರಾಯಪಟ್ಟರು.
ಓದಿ: ಯಾವುದೇ ಮೈತ್ರಿ ಇಲ್ಲ, ಮುಂಬರುವ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತೇವೆ : ಹೆಚ್ ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಜೊತೆ ಚರ್ಚೆ ಮಾಡಿ ಮುಂದಿನ ನಡೆಯನ್ನು ಪ್ರಕಟಿಸುತ್ತೇನೆ. ಮುಂದಿನ ಹೆಜ್ಜೆ ಏನೆಂಬುದನ್ನು ಇನ್ನೆರೆಡು ದಿನಗಳಲ್ಲಿ ತಿಳಿಸುತ್ತೇನೆ ಎಂದರು.
ಜೆಡಿಎಸ್ ಸೇರಬೇಕು ಎಂಬುದು ನನ್ನ ಇಚ್ಛೆ. ಅವರ ಜೊತೆ ಚರ್ಚೆ ಮಾಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮೊದಲೇ ಹೇಳಿದ್ದೆ. ಪಂಜಾಬ್‌ನಲ್ಲಿ ಆಗಿರುವುದು ಕರ್ನಾಟಕದಲ್ಲಿಯೂ ಆಗಲಿದೆ. ಇದರ ವಿರುದ್ಧ ಹೋರಾಟ ಮಣ್ಣಿನ ಮಕ್ಕಳಿಗೆ ಮಾತ್ರ ಸಾಧ್ಯ. ನಾನು ಹೆಜ್ಜೆ ಇಟ್ಟಲ್ಲಿ ದೇವರು ನನ್ನ ಕೈಬಿಟ್ಟಿಲ್ಲ. ಜನರ ನಾಡಿ ಮಿಡಿತ ನನಗೆ ಗೊತ್ತಿದೆ. ಜೆಡಿಎಸ್ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೆ ಎಂದು ಇಬ್ರಾಹಿಂ ಭವಿಷ್ಯ ನುಡಿದರು.
ಓದಿ: ಜಿಪಂ ಚುನಾವಣೆ ಮಾಡದವರು ಅವಧಿಗೆ ಮುನ್ನವೇ ವಿಧಾನಸಭೆಗೆ ಚುನಾವಣೆ ನಡೆಸ್ತಾರಾ?: ಸಿದ್ದರಾಮಯ್ಯ
ನಾನು ಸೈದ್ದಾಂತಿಕ ರಾಜಕಾರಣವನ್ನು ಮಾಡಿಕೊಂಡು ಬಂದವನು. ಜೆಡಿಎಸ್‌ನಲ್ಲಿ ನನ್ನ ಸಿದ್ಧಾಂತಕ್ಕೆ ಪೆಟ್ಟು ಬೀಳುವುದಿಲ್ಲ. ಜೆಡಿಎಸ್ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಯಾವುದೇ ಕರಾರು ಹಾಕುವುದಿಲ್ಲ ಎಂದು ಇಬ್ರಾಹಿಂ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಶೇ. 21ರಷ್ಟು ಮುಸ್ಲಿಮರು ಇದ್ದೇವೆ. ಆದರೆ 70 ವರ್ಷದಿಂದ ಯಾರಾದರೂ ಕೆಪಿಸಿಸಿ ಅಧ್ಯಕ್ಷ ಆಗಿದ್ದಾರಾ? ಪ್ರತಿಪಕ್ಷದ ನಾಯಕರಾಗಿದ್ದಾರಾ? ಎಂದು ಪ್ರಶ್ನಿಸಿದ ಇಬ್ರಾಹಿಂ, ಶೇ. 90ರಷ್ಟು ಮುಸ್ಲಿಮರ ಮತ ಪಡೆದುಕೊಂಡು ಗೌರವಯುತ ಸ್ಥಾನ ಬೇಡ, ಗೌರವಯುತವಾಗಿ ಮಾತನಾಡುವುದು ಬೇಡವೇ? ಎಂದು ಕಾಂಗ್ರೆಸ್‌ನ್ನು ಪ್ರಶ್ನಿಸಿದರು.