ಬೆಂಗಳೂರು: ಪಾಲಿಕೆಯ ತುರ್ತು ಕೆಲಸಗಳಿಗೆ ಯಾವುದೇ ತೊಂದರೆಯಾಗದಂತೆ ಅನುದಾನ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಜೆಟ್ಗೆ ಅನುಮೋದನೆ ಕೊಡಿ ಎಂದು ಇವತ್ತು ಸಿಎಂ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೆವು. ಇನ್ನು ತುರ್ತು ಕೆಲಸಗಳು ಹಾಗೂ ದಿನನಿತ್ಯದ ಕೆಲಸಗಳಿಗೆ ಹಣ ಬಿಡುಗಡೆ ಮಾಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಬಗ್ಗೆ ಚರ್ಚೆ ಆಗಿದೆಯಂತೆ. ಬಜೆಟ್ ಬಗ್ಗೆ ಸಿಎಂ ಯಾವ ನಿರ್ಧಾರ ಕೈಗೊಂಡಿದ್ದಾರೆ ಅನ್ನೋ ಮಾಹಿತಿ ನನಗೆ ಸಿಕ್ಕಿಲ್ಲ ಎಂದರು.
ವೈಟ್ ಟ್ಯಾಪಿಂಗ್, ಟೆಂಡರ್ ಶ್ಯೂರ್ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಾಗಿದೆ ಎಂದು ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಭ್ರಷ್ಟಾಚಾರವಾಗಿದ್ರೆ ಸಿಎಂ ತನಿಖೆ ನಡೆಸಲಿ. ಈ ಕಾಮಗಾರಿಗಳನ್ನು ಕೌನ್ಸಿಲ್ನಲ್ಲಿ ಅನುಮೋದನೆ ಪಡೆದೇ ಮಾಡಲಾಗಿದೆ. ಭ್ರಷ್ಟಾಚಾರ ನಡೆದಿದ್ದರೆ, ಯಾರು ತಪ್ಪಿತಸ್ಥರಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಗಂಗಾಂಬಿಕೆ ಹೇಳಿದ್ದಾರೆ.