ಬೆಂಗಳೂರು : ವೀರಶೈವ-ಲಿಂಗಾಯತ ಸಮುದಾಯವನ್ನು ಹಿಂದುಳಿವ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ಮುಂದಾಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡೆಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದೆ. ಹಾಗಾಗಿ, ಇಂದಿನ ಸಂಪುಟ ಸಭೆಯ ಅಜೆಂಡಾದಿಂದ ಈ ವಿಷಯವನ್ನು ಕೈಬಿಡಲಾಗಿದೆ.
ತರಾತುರಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಮುಂದಾಗಿದ್ದ ಯಡಿಯೂರಪ್ಪ, ಹೈಕಮಾಂಡ್ ಸೂಚನೆ ಮೇರೆಗೆ ಯೂಟರ್ನ್ ಹೊಡೆದಿದ್ದಾರೆ.
ಗುರುವಾರ ರಾತ್ರಿ ಆಪ್ತ ಸಚಿವರ ಸಭೆ ನಡೆಸಿ, ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವ ಇಂಗಿತ ವ್ಯಕ್ತಪಡಿಸಿದ್ದ ಸಿಎಂ, ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆಯಲು ಸಂಪುಟ ಸಭೆಯ ಅಜೆಂಡಾದಲ್ಲಿ ವಿಷಯವನ್ನು ಸೇರಿಸಿದ್ದರು. ಅಲ್ಲದೆ ಸಂಪುಟ ಸಭೆಯ ನಂತರ, ಸ್ವತಃ ತಾವೇ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ನಂತರ ರಾಜ್ಯದಲ್ಲಿ ಇತರ ಸಮುದಾಯಗಳು ನಿಗಮ ಮಂಡಳಿಗೆ ಬೇಡಿಕೆ ಇಡುತ್ತಿದ್ದು, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ, ಹೋರಾಟದ ಸ್ವರೂಪಕ್ಕೆ ತಿರುಗಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ಇದರ ನಡುವೆ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಿದ್ರೇ, ರಾಜ್ಯದಲ್ಲಿ ಮೀಸಲಾತಿ ಕುರಿತು ಹೊಸ ಸಮಸ್ಯೆ ಎದುರಾಗಲಿದೆ ಎನ್ನುವ ಅಂಶಗಳನ್ನು ರಾಜ್ಯದ ಕೆಲ ನಾಯಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ.
ವಿಷಯದ ಗಂಭೀರತೆ ಅರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೆಳಗ್ಗೆಯೇ ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಮೀಸಲಾತಿ ವಿಷಯ ಗಂಭೀರವಾದದ್ದಾಗಿದೆ, ಆತುರದ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವ ಕುರಿತು ಮೊದಲು ಕೇಂದ್ರದ ಜೊತೆ ಚರ್ಚೆ ನಡೆಸಿ. ಇಂದಿನ ಸಂಪುಟ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಬೇಡಿ. ದೆಹಲಿಗೆ ಬಂದು ಚರ್ಚೆ ನಡೆಸಿ ಎಂದು ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.
ಬಿಜೆಪಿ ಹೈಕಮಾಂಡ್ನಿಂದ ಸೂಚನೆ ಬರುತ್ತಿದ್ದಂತೆ ಸಿಎಂ ಯಡಿಯೂರಪ್ಪ, ತಮ್ಮ ನಿಲುವು ಬದಲಿಸಿಕೊಂಡು ಯೂಟರ್ನ್ ಹೊಡೆದಿದ್ದಾರೆ. ಸಂಪುಟ ಸಭೆಯಲ್ಲಿ ವೀರಶೈವ-ಲಿಂಗಾಯತ ವಿಷಯದ ಚರ್ಚೆಯನ್ನು ಕೈಬಿಟ್ಟಿರುವುದಾಗಿ ಸಂಪುಟ ಸಭೆಗೂ ಮೊದಲೇ ಪ್ರಕಟಿಸಿ, ದೆಹಲಿಗೆ ಹೋಗಿ ಕೇಂದ್ರದ ಜೊತೆ ಮಾತುಕತೆ ನಡೆಸಿ ನಂತರ ಈ ವಿಚಾರದಲ್ಲಿ ಮುಂದುವರೆಯುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ. ನಂತರ ಸಂಪುಟ ಸಭೆ ಬಳಿಕ ನಡೆಸಬೇಕಿದ್ದ ಸುದ್ದಿಗೋಷ್ಠಿಯನ್ನೂ ರದ್ದುಗೊಳಿಸಿದ್ದಾರೆ.