ಬೆಂಗಳೂರು: ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಜೀವನದ ಭದ್ರತೆ, ಆರೋಗ್ಯ, ಶಿಕ್ಷಣ ಮೊದಲಾದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಅವರಿಗೆ ಜೀವನ ಭದ್ರತೆಯೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಜ್ಯದಲ್ಲಿ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ಇ - ಶ್ರಮ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ಅಸಂಘಟಿತ ಕಾರ್ಮಿಕರ ನೋಂದಣಿ ಮೊದಲ ಬಾರಿ ನಡೆಯುತ್ತಿದೆ. ಅವರನ್ನು ಗುರುತಿಸಲಾಗುತ್ತಿದೆ ಎಂದರು.
ಕೂಲಿ ಕಾರ್ಮಿಕ ಇರಲಿ, ರೈತ ಕಾರ್ಮಿಕ ಇರಲಿ, ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು. ಒಂದು ದೇಶದ ಸಂಪತ್ತು ಸೃಷ್ಟಿ ಕೇವಲ ಹಣದಿಂದ ಸಾಧ್ಯವಿಲ್ಲ. ಹಣ ಬಳಕೆ ಮಾಡಿ, ಶ್ರಮ ವಹಿಸಿ, ಭೌತಿಕ ಸೌಲಭ್ಯ ಸೃಷ್ಟಿಸಬೇಕಾದರೆ ಕಾರ್ಮಿಕರೇ ಬೇಕು. ಅಸಂಘಟಿತ ಕಾರ್ಮಿಕರೇ ದೇಶದ ಶಕ್ತಿ. ಆರ್ಥಿಕತೆಯ ಪಿರಮಿಡ್ನ ತಳಹದಿ ಇವರು. ಈ ತಳಹದಿ ಭದ್ರವಾಗಿದ್ದರೆ ಮಾತ್ರ ಆರ್ಥಿಕತೆ ಉತ್ತಮವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯಕ್ಕೆ 1.8 ಕೋಟಿ ಕಾರ್ಮಿಕರ ನೋಂದಣಿಯ ಗುರಿ ನಿಗದಿ ಪಡಿಸಲಾಗಿದೆ. ನಿಜವಾದ ಅಸಂಘಟಿತ ಕಾರ್ಮಿಕರ ನೋಂದಣಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಈ ನೋಂದಣಿಯಿಂದ ಕಾರ್ಮಿಕರಿಗೆ ಇರುವ ಅನುಕೂಲಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಮನವೊಲಿಸಬೇಕು ಎಂದು ಸೂಚಿಸಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕಲ್ಪನಾ, ಇ - ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ವಿ. ಪೊನ್ನರಾಜ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ್ ಪಾಷಾ ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ನಾನು 98 ರಲ್ಲಿ ಸತ್ಯಸಾಯಿ ಬಾಬಾ ದರ್ಶನ ಪಡೆದ ಮೇಲೆ ಮಾಂಸಹಾರ ತ್ಯಜಿಸಿದೆ : ಸಿಎಂ ಬೊಮ್ಮಾಯಿ