ಬೆಂಗಳೂರು : ಹಲವು ಗಣ್ಯರು,ರಾಜಕಾರಣಿಗಳು ಲಕ್ಷಗಳ ಲೆಕ್ಕದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದರೆ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೋವಿಡ್-19 ನಿಯಂತ್ರಣಕ್ಕಾಗಿ ಸಿಎಂ ತುರ್ತು ಪರಿಹಾರ ನಿಧಿಗೆ ತಮ್ಮ ಒಂದು ವರ್ಷದ ವೇತನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ತಮ್ಮ ಮಂತ್ರಿ ಮಂಡಲದ ಸಹೋದ್ಯೋಗಿಗಳು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಕೂಡ ತಮ್ಮ ಕೈಲಾದ ಸಹಾಯ ಮಾಡುವಂತೆ ಸಿಎಂ ಮನವಿ ಮಾಡಿದ್ದಾರೆ. ಈಗಾಗಲೇ ಕೋವಿಡ್-19 ನಿಯಂತ್ರಣಕ್ಕಾಗಿ ಸಿಎಂ ಯಡಿಯೂರಪ್ಪ ನೆರವು ಕೋರಿದ್ದರು. ಈಗಾಗಲೇ ಇನ್ಫೋಸಿಸ್ ಫೌಂಡೇಶನ್, ಪುನೀತ್ ರಾಜ್‌ಕುಮಾರ್, ಕಾರ್ಪೊರೇಟ್ ಕಂಪನಿಗಳು ಸೇರಿ ಹಲವು ಗಣ್ಯರು ದೇಣಿಗೆ ನೀಡಿದ್ದಾರೆ.
ಕೆಲ ಸಂಸದರು ತಮ್ಮ ಸ್ಥಳೀಯ ಕ್ಷೇತ್ರಾಭಿವೃದ್ಧಿ ಅನುದಾನ ಬಳಕೆಯ ಹಣ ನೀಡಿದ್ದಾರೆ. ಅದರ ನಡುವೆಯೇ ಸಿಎಂ ತಮ್ಮ ಒಂದು ವರ್ಷದ ವೇತನವನ್ನೇ ಪರಿಹಾರ ನಿಧಿಗೆ ನೀಡುವ ಘೋಷಣೆ ಮಾಡುವ ಮೂಲಕ ದೇಣಿಗೆ ನೀಡಲು ಪ್ರೋತ್ಸಾಹ ನೀಡುತ್ತಿದ್ದಾರೆ.