ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ನೆಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅದಕ್ಕೂ ಮುನ್ನ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ತಡರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಂಪುಟದಲ್ಲಿ ಖಾಲಿಯಿರುವ ನಾಲ್ಕು ಸ್ಥಾನಗಳ ಭರ್ತಿ, ರಾಜಕೀಯ ಕಾರ್ಯದರ್ಶಿಗಳ ನೇಮಕ ಹಾಗೂ ನಿಗಮ - ಮಂಡಳಿಗಳಿಗೆ ಅಧ್ಯಕ್ಷ - ಉಪಾಧ್ಯಕ್ಷರ ಪುನರ್ ನೇಮಕ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ನಾಳೆ ದೆಹಲಿಗೆ ಸಿಎಂ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಹುಬ್ಬಳ್ಳಿಯಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಸಲಾಗಿತ್ತು. ಇದೀಗ ದೆಹಲಿಯಲ್ಲೂ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುತ್ತಿದ್ದಾರೆ.
ಇದೇ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಕಳೆದ ಬಾರಿಯ ನವದೆಹಲಿ ಭೇಟಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸದೆ ವಾಪಸಾಗಿದ್ದ ಸಿಎಂ ಮುಂದಿನ ಭೇಟಿ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸುತ್ತೇನೆ ಎಂದಿದ್ದರು. ಅದರಂತೆ ಈ ಬಾರಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
20 ನಿಮಿಷಗಳ ಗುಪ್ತ್ .. ಗುಪ್ತ್ ಮಾತುಕತೆ
ನಿನ್ನೆ ತಡರಾತ್ರಿ ಬಿಎಸ್ವೈ ಭೇಟಿ ಮಾಡಿರುವ ಬೊಮ್ಮಾಯಿ ಸುಮಾರು 20 ನಿಮಿಷಗಳ ಕಾಲ ಗುಪ್ತ್ ಗುಪ್ತ್ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ನಿಗಮ ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರ ರಾಜೀನಾಮೆ ಪಡೆದು ಹೊಸದಾಗಿ ನೇಮಕ ಮಾಡುವಂತೆ ಪಕ್ಷದ ಕಡೆಯಿಂದ ಮುಖ್ಯಮಂತ್ರಿಗಳಿಗೆ ನಿರ್ದೇಶನ ಬಂದಿದ್ದು, ಈ ಸಂಬಂಧ ಯಡಿಯೂರಪ್ಪ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ವಿರುದ್ಧ ಸಚಿವ ಕಾರಜೋಳ ವಾಗ್ದಾಳಿ
ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ವಿಚಾರ ಚರ್ಚೆ
ಈ ಹಿಂದೆ, ಯಡಿಯೂರಪ್ಪ ಅವರ ಆಪ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅವರನ್ನು ಬದಲಾಯಿಸಿದರೆ ಯಡಿಯೂರಪ್ಪ ಕೋಪಗೊಳ್ಳುತ್ತಾರೆ ಎನ್ನುವ ಕಾರಣದಿಂದ ತಾರಾತುರಿಯಲ್ಲಿ ಯಾವುದೇ ನಿರ್ಧಾರಕೈಗೊಳ್ಳದೇ, ಮೊದಲು ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ಜೊತೆ ರಾಜಕೀಯ ಕಾರ್ಯದರ್ಶಿಗಳ ನೇಮಕ ವಿಚಾರ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಹೈಕಮಾಂಡ್ ನಾಯಕರ ಭೇಟಿಗೂ ಮುನ್ನ ಯಡಿಯೂರಪ್ಪ ಅವರ ಸಲಹೆ ಪಡೆದು ಮುಂದಿನ ಹೆಜ್ಜೆಯಿಡಲು ಬೊಮ್ಮಾಯಿ ನಿರ್ಧರಿಸಿದ್ದು, ಅದರಂತೆ ಕಳೆದ ರಾತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.