ಬೆಂಗಳೂರು: ಮುಂದಿನ ತಿಂಗಳ ಬಜೆಟ್ ಮಂಡನೆಗಾಗಿ ಸಿಎಂ ಯಡಿಯೂರಪ್ಪ ಸಂಪನ್ಮೂಲ ಕ್ರೋಢೀಕರಣದ ಕಸರತ್ತಿನಲ್ಲಿ ತೊಡಗಿದ್ದಾರೆ. ಅದಕ್ಕಾಗಿನೇ ನಾಲ್ಕನೇ ಶನಿವಾರದ ರಜಾ ದಿನವಾದ್ರೂ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಮಾರ್ಚ್ 5ಕ್ಕೆ ಬಜೆಟ್ ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಸಿಎಂ ಬಜೆಟ್ ಪೂರ್ವಭಾವಿ ಸಭೆಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಆದರೆ, ಈ ಬಾರಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಸಿಎಂ ಸಂಪನ್ಮೂಲ ಹೊಂದಾಣಿಕೆಗೆ ಹರಸಾಹಸ ಪಡುತ್ತಿದ್ದಾರೆ. ಇದಕ್ಕಾಗಿ ಕಳೆದ ಒಂದು ವಾರದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸತತವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.
ರಜೆ ದಿನವೂ ಅಧಿಕಾರಿಗಳ ಜೊತೆ ಸಭೆ: ಇಂದು ನಾಲ್ಕನೇ ಶನಿವಾರ ರಜಾ ದಿನವಾದರೂ ಸಿಎಂ ಮಧ್ಯಾಹ್ನದ ಬಳಿಕ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಶಕ್ತಿ ಭವನದಲ್ಲಿ ಸುದೀರ್ಘ ಸಭೆ ನಡೆಸಿದರು. ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಈ ಬಾರಿ ವಿತ್ತೀಯ ಕೊರತೆ ಹೆಚ್ಚಾಗದಂತೆ ಯಾವ ರೀತಿಯಲ್ಲಿ ಬಜೆಟ್ ರೂಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದರು. ಯಾವ ಇಲಾಖೆಗಳಿಂದ ಅನುದಾನ ಕಡಿತಗೊಳಿಸಬಹುದು, ಎಷ್ಟು ಅನುದಾನ ಕಡಿತಗೊಳಿಸಬಹುದು ಎಂಬ ಬಗ್ಗೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಸಂಪನ್ಮೂಲ ಸಂಗ್ರಹದ ತಲೆನೋವು: ಈಗಾಗಲೇ ಜಿಎಸ್ಟಿ ಪರಿಹಾರ ಮೊತ್ತ, ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಮೊತ್ತ ಖೋತಾ, ಕಳಪೆ ತೆರಿಗೆ ಸಂಗ್ರಹ ಹಿನ್ನೆಲೆ ಸುಮಾರು 40,000 ಕೋಟಿ ರೂ. ಆದಾಯ ಕೊರತೆ ಎದುರಾಗಿದೆ. ಇದರಿಂದ ಸಿಎಂ ಯಡಿಯೂರಪ್ಪ ತಲೆನೋವು ಹೆಚ್ಚಾಗಿದ್ದು, ಯಾವ ರೀತಿ ಈ ಕೊರತೆಯನ್ನು ಸರಿದೂಗಿಸಬಹುದು ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ಈ ಬಾರಿ ಹಣಕಾಸು ಹೊಂದಿಸಲು ಸುಮಾರು 46,000 ಕೋಟಿ ರೂ. ಸಾಲ ಪಡೆಯುವ ಬಗ್ಗೆನೂ ಸರ್ಕಾರ ಯೋಜಿಸಿದೆ.
ಒಟ್ಟಿನಲ್ಲಿ ಜನಪ್ರಿಯ ಯೋಜನೆ, ರೈತ ಸ್ನೇಹಿ ಯೋಜನೆಗಳನ್ನು ನೀಡುವ ಅನಿವಾರ್ಯತೆಯಲ್ಲಿರುವ ಸಿಎಂ ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣದ ಕಸರತ್ತಿನಲ್ಲಿ ತೊಡಗಿದ್ದಾರೆ.