ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವದಂತಿ ವಿಚಾರದ ಹಿನ್ನೆಲೆ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದ ಬೆನ್ನಲ್ಲೇ ಮಠಾಧೀಶರು ಕೂಡ ಸಿಎಂ ನಿವಾಸದತ್ತ ದೌಡಾಯಿಸುತ್ತಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಬಾಲೆಹೊಸೂರು ಪೀಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರ ತಂಡ ಆಗಮಿಸಿತು. ವೀರಶೈವ ಲಿಂಗಾಯತ ಸಮುದಾಯದ 20 ಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮಿಸಿದ್ದು, ಯಡಿಯೂರಪ್ಪಗೆ ಬೆಂಬಲ ಸೂಚಿಸಿದ್ದಾರೆ.
ಯಡಿಯೂರಪ್ಪನವರೇ ಪೂರ್ಣಾವಧಿಯಾಗಿ ಸಿಎಂ ಆಗಬೇಕು ಎಂಬ ನಿಲುವು ವ್ಯಕ್ತಪಡಿಸಿರುವ ಶ್ರೀಗಳು, ಏನೇ ಆದರೂ ನಿಮ್ಮ ಜೊತೆ ಸಮುದಾಯ ಇರಲಿದೆ. ಯಾವುದಕ್ಕೂ ಚಿಂತೆ ಮಾಡಬೇಡಿ ಎಂದು ಅಭಯ ನೀಡಿದ್ದಾರೆ.
ಮಧ್ಯಾಹ್ನ 12.30 ರ ವೇಳೆಗೆ ಸಿಎಂ ನಿವಾಸಕ್ಕೆ ಅಳಂದ ಮಠದ ಮರುಳ ಸಿದ್ದೇಶ್ವರ ಸ್ವಾಮೀಜಿ ಆಗಮಿಸಿದರು. ಸಿಎಂ ತಮ್ಮ ನಿವಾಸದಲ್ಲಿ ಇಲ್ಲ. ವಿಧಾನಸೌಧದಲ್ಲಿದ್ದಾರೆ ಎಂದರೂ ಕೇಳದೆ ಸಿಎಂ ಬರುವ ತನಕ ಕಾಯುತ್ತೇವೆ ಎಂದು ಸಿಎಂ ಕಾವೇರಿ ನಿವಾಸದೊಳಗೆ ಸ್ವಾಮೀಜಿ ತೆರಳಿದರು. ಸಿಎಂ ಬಂದ ನಂತರ ಕೆಲಕಾಲ ಮಾತುಕತೆ ನಡೆಸಿದರು.
ಸಿಎಂ ನಿವಾಸಕ್ಕೆ ನಿಗಮ ಮಂಡಳಿ ಅಧ್ಯಕ್ಷರ ದೌಡು
ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರದ ಹಿನ್ನೆಲೆ ಯಡಿಯೂರಪ್ಪ ಪರ ನಿಗಮಗಳ ಅಧ್ಯಕ್ಷರು ಬ್ಯಾಟಿಂಗ್ ಮಾಡುತ್ತಿದ್ದಾರೆ. ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ರಘು ಕೌಟಿಲ್ಯರವರ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ನಿಗಮದ ಅಧ್ಯಕ್ಷರು ಸಿಎಂ ಭೇಟಿ ಮಾಡಿದ್ದು, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.