ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಆಕ್ಸಿಜನ್ ಕಂಪನಿಗಳ ಜೊತೆ ಸಭೆ ನಡೆಸಿದ ಬೆನ್ನಲ್ಲೆ, ಇಂದು ರೆಮ್ಡಿಸಿವಿರ್ ಸರಬರಾಜು ಕುರಿತು ತುರ್ತು ಸಭೆ ಕರೆದಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರೆಮ್ಡಿಸಿವಿರ್ ಸರಬರಾಜು ಮಾಡುವ ಕಂಪನಿಯ ಪ್ರತಿನಿಧಿಗಳು, ರೆಮ್ಡಿಸಿವಿರ್ ಉತ್ಪಾದನೆ ಮಾಡುವ ಮೈಲಾನ್ ಫಾರ್ಮ ಕಂಪನಿ ಬೆಂಗಳೂರಿನಲ್ಲಿಯೇ ಇದ್ದು, ಅದರ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ: ವಿಜಯಪುರದಲ್ಲಿ 3 ಪ್ರಕರಣ ದಾಖಲು
ನಿನ್ನೆಯಷ್ಟೇ ಆಕ್ಸಿಜನ್ ಉತ್ಪಾದನಾ ಕಂಪನಿಗಳ ಜೊತೆ ಸಭೆ ನಡೆಸಿದ್ದ ಸಿಎಂ, ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹರಿಸುವ ಭರವಸೆ ನೀಡಿದ್ದರು. ಅದರ ಬೆನ್ನಲ್ಲೇ ಇಂದು ರೆಮ್ಡಿಸಿವಿರ್ ಸರಬರಾಜು ಸಂಬಂಧ ಇಂದು ತುರ್ತು ಸಭೆ ಕರೆದಿದ್ದಾರೆ.
ರಾಜ್ಯದ ಕೋಟಾ, ಸದ್ಯದ ಬೇಡಿಕೆ, ಇರುವ ದಾಸ್ತಾನು, ಹೆಚ್ಚುವರಿ ಔಷಧ ಹೊಂದಿಸಿಕೊಳ್ಳುವುದು ಮತ್ತು ಆಸ್ಪತ್ರೆಗಳಿಗೆ ಜಿಲ್ಲಾವಾರು ಅಗತ್ಯಕ್ಕನುಗುಣವಾಗಿ ಸರಿಯಾದ ರೀತಿಯ ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಆಮ್ಲಜನಕ ಕೊರತೆಯಿಂದ ರೋಗಿಗಳು ಮೃತಪಟ್ಟ ರೀತಿ ಔಷಧ ಕೊರತೆ ಸಂಭವಿಸಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ಸಿಎಂ ತುರ್ತು ಸಭೆ ನಡೆಸಲಿದ್ದಾರೆ.