ಬೆಂಗಳೂರು: 2020ರ ಕಡೆಯ ದಿನದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಲು ಉದ್ದೇಶಿಸಿದ್ದು, ನಾಳೆ ಏನೆಲ್ಲಾ ಮಾತನಾಡಲಿದ್ದಾರೆ ಎನ್ನುವ ಕುತೂಹಲ ಹುಟ್ಟಿಸಿದೆ.
2020ಕ್ಕೆ ಗುಡ್ ಬೈ ಹೇಳಿ 2021ನೇ ವರ್ಷವನ್ನು ಸ್ವಾಗತಿಸಲು ಕ್ಷಣಗಣನೆ ಆರಂಭಗೊಂಡಿದ್ದು, ವರ್ಷದ ಕಡೆಯ ದಿನವಾದ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ. ವರ್ಷದಲ್ಲಿ ಎದುರಾದ ಸಂಕಷ್ಟಗಳು, ಸವಾಲುಗಳನ್ನು ಸರ್ಕಾರ ಎದುರಿಸಿದ ರೀತಿ, ಹೊಸ ವರ್ಷದ ಕನಸುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇದರ ಜೊತೆ ಇತ್ತೀಚೆಗೆ ನಡೆದಿರುವ ಉಪಚುನಾವಣೆಗಳಲ್ಲಿ ಬಿಜೆಪಿ ಜಯ ಗಳಿಸಿರುವುದು, ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ವಿಚಾರವನ್ನೂ ಇರಿಸಿಕೊಂಡು ಕೋವಿಡ್ ನಡುವಿನ ಚುನಾವಣಾ ಪರ್ವದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ.
ಕೊರೊನಾ ರೂಪಾಂತರ ವೈರಸ್ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ನಾಳಿನ ಸುದ್ದಿಗೋಷ್ಠಿಯಲ್ಲಿ ನೈಟ್ ಕರ್ಫ್ಯೂ, ಲಾಕ್ಡೌನ್, ಕೆಲ ಪ್ರದೇಶಗಳ ಸೀಲ್ ಡೌನ್, ಕಟ್ಟುನಿಟ್ಟಿನ ಮಾರ್ಗಸೂಚಿಯಂತಹ ಯಾವುದಾದರೂ ನಿರ್ಧಾರ ಪ್ರಕಟಿಸುತ್ತಾರಾ ಎನ್ನುವ ಚರ್ಚೆ ಆರಂಭಗೊಂಡಿದೆ.
ಇಷ್ಟು ಮಾತ್ರವಲ್ಲದೇ ಬಹುನಿರೀಕ್ಷಿತ ಕೊರೊನಾ ವ್ಯಾಕ್ಸಿನ್ ಕುರಿತು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಭರವಸೆ, ಯಾವಾಗ ಲಸಿಕೆ ಲಭ್ಯವಾಗಬಹುದು, ಲಸಿಕೆ ದಾಸ್ತಾನು ಮತ್ತು ವಿತರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಿಎಂ ಮಾಹಿತಿ ನೀಡಬಹುದು ಎನ್ನುವ ನಿರೀಕ್ಷೆಯೂ ಇದೆ.
ಇದನ್ನೂ ಓದಿ: ಜನವರಿ 4, 5 ರಂದು ಬಜೆಟ್‌ಪೂರ್ವ ಶಾಸಕರ ಸಭೆ ಕರೆದ ಸಿಎಂ