ಬೆಂಗಳೂರು: ಕೊರೊನಾ ಅನ್ಲಾಕ್ ಪ್ರಕ್ರಿಯೆ ಜೊತೆ ಜೊತೆಗೆ ಕೊರೊನಾ ಸ್ಥಿತಿಗತಿ, ಆರ್ಥಿಕ ಸುಧಾರಣೆ ಕುರಿತು ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸುತ್ತಿದ್ದಾರೆ.
ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಏಳು ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಆಂಧ್ರಪ್ರದೇಶ, ಉತ್ತರಪ್ರದೇಶ, ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸುತ್ತಿದ್ದಾರೆ.
ವಿಡಿಯೋ ಸಂವಾದದ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಹೆಸರು ಕರ್ನಾಟಕದ್ದಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡುತ್ತಿದ್ದಾರೆ. ಲಾಕ್ಡೌನ್ ನಂತರ ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡ ಬಳಿಕ ಕೊರೊನಾ ಸೋಂಕು ಹಬ್ಬುವಿಕೆ ತೀವ್ರತೆ ಪಡೆದಿದ್ದು,ಕೊರೊನಾ ನಿಯಂತ್ರಣ, ಚಿಕಿತ್ಸಾ ಸೌಲಭ್ಯಕ್ಕೆ ರಾಜ್ಯ ಕೈಗೊಂಡ ಕ್ರಮ, ಕಲ್ಪಿಸಿರುವ ವ್ಯವಸ್ಥೆ, ಅನ್ಲಾಕ್ ಪ್ರಕ್ರಿಯೆ ಅನುಷ್ಠಾನ, ಹಂತ ಹಂತವಾಗಿ ಆರ್ಥಿಕ ಚಟುವಟಿಕೆ ಆರಂಭಗೊಳ್ಳುತ್ತಿರುವ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.
ಕೊರೊನಾದಿಂದ ರಾಜ್ಯ ಎದುರಿಸುತ್ತಿರುವ ಪರಿಸ್ಥಿತಿ ಕುರಿತು ಪ್ರಧಾನಿಗಳಿಗೆ ಸಿಎಂ ಸಮಗ್ರ ಮಾಹಿತಿ ಒದಗಿಸುತ್ತಿದ್ದಾರೆ. ಆರ್ಥಿಕ ಚಟುವಟಿಕೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡಿದ್ದಾರೆ ಎನ್ನಲಾಗಿದೆ. ವಿಡಿಯೋ ಸಂವಾದದಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಸ್. ವಿಜಯಭಾಸ್ಕರ್ ಉಪಸ್ಥಿತರಿದ್ದರು.