ಬೆಂಗಳೂರು: ಕೊರೊನಾ 2ನೇ ಅಲೆಯ ಅನ್ಲಾಕ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ಎಲ್ಲಾ ಚಟುವಟಿಕೆಗೆ ಚಾಲನೆ ಸಿಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ನಾಳೆ ಕಲಬುರ್ಗಿ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿರುವ ಅವರು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಬೆಳಗ್ಗೆ 9.30 ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಸಿಎಂ ಯಡಿಯೂರಪ್ಪ ಕಲಬುರ್ಗಿಗೆ ತೆರಳಲಿದ್ದಾರೆ. 11.15ಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದ ಅಡಿಯಲ್ಲಿ ನೂತನ ಮಾದರಿಯ ಕಾಯಿಪಲ್ಲೆ ಮಾರುಕಟ್ಟೆ ಸಂಕಿರ್ಣದ ಅಡಿಗಲ್ಲು ಸಮಾರಂಭ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ 11.45 ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ.
ಕಲಬುರ್ಗಿಯ ಲೋಕೋಪಯೋಗಿ ಇಲಾಖೆ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 12.30 ಕ್ಕೆ ಸಹಕಾರ ಇಲಾಖೆ ವತಿಯಿಂದ ಆಯೋಜಿಸಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ರೈತರಿಗೆ ಬಡ್ಡಿ ರಹಿತ ಸಾಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 1.15 ಕ್ಕೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದು, ಕೆಲಕಾಲ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಕಲಬುರ್ಗಿ ಜಿಲ್ಲಾ ಕೋವಿಡ್ 19 ನಿಯಂತ್ರಣ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಕುರಿತಂತೆ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಲಿದ್ದಾರೆ. ಸಂಜೆ 4.14 ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಹೊರಟು 5.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ವಾಪಸಾಗಲಿದ್ದಾರೆ.
ಇದನ್ನೂ ಓದಿ: ಹೆಚ್ಡಿಕೆ-ಸುಮಲತಾ ಬಳಸುತ್ತಿರುವ ಭಾಷೆ ಸರಿಯಿಲ್ಲ, ನೋಡಿ ಮಾತನಾಡಿ: ಕೆ.ಎಸ್.ಈಶ್ವರಪ್ಪ