ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಷಯ ಚರ್ಚೆಯಾಗುತ್ತಿರುವ ನಡುವೆ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ದಿಢೀರ್ ದೆಹಲಿಗೆ ತೆರಳಿದ್ದಾರೆ.
ನಾಯಕತ್ವ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಘಟಕದ ನಾಯಕರು, ಹಿರಿಯ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಸಿಎಂ ಪುತ್ರ ದೆಹಲಿಗೆ ತೆರಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಸಚಿವ ಸಿ.ಪಿ ಯೋಗೀಶ್ವರ್ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿ ಭೇಟಿ ಸಾಧ್ಯವಾಗದೆ ಬರಿಗೈಲಿ ವಾಪಸ್ಸಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಇದಾದ, ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿತ್ತು. ಈ ನಡುವೆ ವಿಜಯೇಂದ್ರ ದೆಹಲಿಗೆ ಹೋಗಿದ್ದಾರೆ.
ಇದನ್ನೂ ಓದಿ: ಸುಪುತ್ರ ವಿಜಯೇಂದ್ರನಿಗೆ ತಂದೆಯ ಸ್ಥಾನ ಪತನದ ಮುನ್ಸೂಚನೆ ಸಿಕ್ಕಿದೆ: ಯತ್ನಾಳ್ ಕಿಡಿ
ಮೂಲಗಳ ಪ್ರಕಾರ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲು ವಿಜಯೇಂದ್ರ ತೆರಳಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ವಿದ್ಯಮಾನಗಳ ಕುರಿತು ಮಾಹಿತಿ ನೀಡಲಿದ್ದಾರೆ. ಸಂಪುಟ ಸದಸ್ಯರಾಗಿದ್ದುಕೊಂಡು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಇದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಆಗುತ್ತಿದೆ. ಹೀಗಾಗಿ, ಯೋಗೀಶ್ವರ್ಗೆ ಸೂಕ್ತ ನಿರ್ದೇಶನ ನೀಡುವಂತೆಯೂ ಅಗತ್ಯ ಬಿದ್ದರೆ ಸಂಪುಟದಿಂದ ಅವರನ್ನು ಕೈಬಿಡಲು ಅನುಮತಿ ನೀಡುವಂತೆ ವಿಜಯೇಂದ್ರ ವರಿಷ್ಠರಿಗೆ ಮನವಿ ಮಾಡುವ ಸಾಧ್ಯತೆಯಿದೆ.
ಇದೇ ವೇಳೆ ಜಿಂದಾಲ್ಗೆ ಭೂಮಿ ನೀಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿರುವುದು, ಸಂಪುಟ ಸಭೆಯಲ್ಲಿ ಜಿಂದಾಲ್ಗೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡ ಕುರಿತು ಮಾಹಿತಿ ನೀಡಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಯಾರೋ ದೆಹಲಿಗೆ ಹೋಗಿ ನಾಯಕತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ : ಕರಡಿ ಸಂಗಣ್ಣ
ನಾಯಕತ್ವ ಬದಲಾವಣೆ ಕುರಿತ ವದಂತಿಗೆ ಖುದ್ದು ಪ್ರತಿಕ್ರಿಯೆ ನೀಡಿದ್ದ ಸಿಎಂ ಯಡಿಯೂರಪ್ಪ, ಆಪ್ತರ ಮೂಲಕವೂ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದ್ದರು. ಇದೀಗ ಈ ಎಲ್ಲ ವಿಷಯದ ಕುರಿತು ಹೈಕಮಾಂಡ್ಗೆ ಮಾಹಿತಿ ನೀಡಲು ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರರನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ.