ಬೆಂಗಳೂರು: ಎಲ್ಲಾ ಸಚಿವರು ತಮ್ಮ ತಮ್ಮ ಇಲಾಖೆಯ ವರ್ಷದ ಪ್ರಗತಿ ಕುರಿತು ವರದಿಯ ಕಿರುಹೊತ್ತಿಗೆಯನ್ನು ಜನರ ಮುಂದಿಡಬೇಕು ಎಂದು ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹೊರತಂದಿರುವ ವರ್ಷದ ಸಾಧನೆಯ ಹೆಜ್ಜೆಗುರುತು ಕಿರುಹೊತ್ತಿಗೆಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಸಿಎಂ, ಪ್ರವಾಸೋದ್ಯಮ, ಯುವಜನ ಸೇವೆ, ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಂಡು ಒಂದು ವರ್ಷವಾಗಿದೆ. ಅವರ ಇಲಾಖೆಯಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಹೊರತಂದ ಕಿರು ಹೊತ್ತಿಗೆಯನ್ನು ಇಂದು ಬಿಡುಗಡೆ ಮಾಡಿದ್ದೇನೆ.
ಹೆಜ್ಜೆಗುರುತು ಎನ್ನುವ ಹೆಸರಿನ ರಿಪೋರ್ಟ್ ಕಾರ್ಡ್ ಸುಂದರವಾಗಿ ಬಂದಿದೆ. ಸಚಿವರು ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ, ಎಲ್ಲಾ ಸಚಿವರು ಇದನ್ನು ನೋಡಿ ಅವರು ಕೂಡ ಇದೇ ರೀತಿ ಕಿರುಹೊತ್ತಿಗೆ ತಂದರೆ ಜನರಲ್ಲಿ ತಾವು ಮಾಡಿದ ಕೆಲಸದ ಬಗ್ಗೆ ಮನವರಿಕೆ ಮಾಡಲು ಅವಕಾಶವಾಗಲಿದೆ. ಒಳ್ಳೆಯ ಕೆಲಸವನ್ನು ಸಿ ಟಿ ರವಿ ಮಾಡಿದ್ದಾರೆ. ಹಾಗಾಗಿ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಹೇಳಿದರು.