ಬೆಂಗಳೂರು : ಕಳೆದ ಬಾರಿಯಂತೆ ಈ ಬಾರಿ ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಚಿಂತನೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸಿಎಂ ಮನವಿ : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಆದ್ರೆ, ನಮ್ಮ ರಾಜ್ಯ ಇಡೀ ದೇಶದಲ್ಲೇ ಸೋಂಕು ಪ್ರಕರಣ ಹೆಚ್ಚಿಗೆ ಹೊಂದಿದೆ. ಹಾಗಾಗಿ, ಜನರು ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಬೇಕು. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಓಡಾಡಬೇಕು. ಪೊಲೀಸರಿಗೆ ಲಾಠಿ ಬೀಸಲು, ವಾಹನ ಸೀಜ್ ಮಾಡಲು ಅವಕಾಶ ನೀಡಬಾರದು. ಜನರ ಸಹಕಾರ ಇದ್ದಾಗ ಮಾತ್ರ ಸೋಂಕು ನಿಯಂತ್ರಣ ಸಾಧ್ಯ ಎಂದು ಮನವಿ ಮಾಡಿದರು.
'ನಾನ್ಯಾಕೆ ದೆಹಲಿಗೆ ಹೋಗ್ಲಿ?' : ದೆಹಲಿಗೆ ಭೇಟಿ ಕೊಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನಾನ್ಯಾಕೆ ದೆಹಲಿಗೆ ಹೋಗಲಿ?, ಮೊನ್ನೆ ಬಸವರಾಜ್ ಬೊಮ್ಮಾಯಿ ಹೋಗಿ ಬಂದಿದ್ದಾರೆ. ರಾಜ್ಯಕ್ಕೆ ಬೇಕಾದ ಸಹಕಾರ ಕೇಳಿ ಬಂದಿದ್ದಾರೆ ಎಂದು ತಿಳಿಸಿದರು.
'ಕೇಂದ್ರ ಸರ್ಕಾರದ ಸಹಕಾರ ಇದೆ' : ನಾನು ಕೇಂದ್ರ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಸ್ವತಃ ಪ್ರಧಾನಿಯವರ ಜೊತೆ ಮಾತನಾಡಿದ್ದೇನೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ದೆಹಲಿಗೆ ಹೋಗುವ ಅವಶ್ಯಕತೆಯಿಲ್ಲ. ಕೇಂದ್ರದಿಂದ ಎಲ್ಲಾ ಸಹಕಾರ ಸಿಗುತ್ತಿದೆ. ಜೆಮ್‌ಶೆಡ್‌ಪುರದಿಂದ ಆಕ್ಸಿಜನ್ ಬಂದಿದೆ. ಸ್ವತಃ ಪ್ರಧಾನಿಯವರೇ ನನ್ನ ಜೊತೆ ಮಾತನಾಡಿದ್ದಾರೆ. ಕೇಂದ್ರದಿಂದ ಎಲ್ಲ ಸಹಕಾರ ಕೊಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣ ಇಳಿಸಿದ ಬಿಬಿಎಂಪಿ