ಬೆಂಗಳೂರು: ಅಧಿಕ ಪೌಷ್ಟಿಕಾಂಶವುಳ್ಳ ಸಿದ್ದು ಹಲಸು ಸಸಿಗಳನ್ನು ತಮ್ಮ ತೋಟದಲ್ಲಿ ಬೆಳೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಮನೆಯಂಗಳ ಮತ್ತು ವಾಣಿಜ್ಯ ಕೃಷಿಗೆ ಸಿದ್ದು ಹಲಸು ಸೂಕ್ತವಾಗಿದೆ. ಈ ಸಸಿಗಳ ಕೃಷಿಗೆ ಮುಂದಾಗುವಂತೆ ರೈತರಿಗೆ ಕರೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಹಭಾಗಿ ಸಸ್ಯ ಅಭಿವೃದ್ದಿ ಕಾರ್ಯಕ್ರಮದ ಅಡಿ ಸಿದ್ದು ಹಲಸು ತಳಿಯ ಸಸ್ಯಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಕೃಷಿ ಅನು ಸಂಧಾನ ಪರಿಷತ್, ನವದೆಹಲಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹಲಸಿನ ತಳಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ತುಮಕೂರು ಜಿಲ್ಲೆಯ ಚೇಳೂರು ಗ್ರಾಮ ಎಸ್.ಎಸ್.ಪರಮೇಶ್ ಎಂಬುವವರ ತೋಟದಲ್ಲಿ ಈ ತಳಿಯನ್ನು ಗುರುತಿಸಲಾಗಿರುವುದು ಶ್ಲಾಘನೀಯ ಎಂದರು.
ಉಳಿದ ಹಲಸಿನ ತಳಿಗಳಿಗೆ ಹೋಲಿಸಿದರೆ ತಾಮ್ರ ಕೆಂಪು ಬಣ್ಣದ ಸಿದ್ದು ಹಲಸು ಅಧಿಕ ಪೌಷ್ಠಿಕಾಂಶಗಳ ಜೊತೆಗೆ ಔಷಧೀಯ ಗುಣಗಳನ್ನು ಹೊಂದಿದೆ. ದೇಶದಲ್ಲಿ ಲಭ್ಯ ಇರುವ ಎಲ್ಲ ಹಲಸು ತಳಿಗಳ ಪೈಕಿ ಸಿದ್ದು ಹಲಸು ಶ್ರೇಷ್ಠ ಮತ್ತು ವಿಶಿಷ್ಠ ಎಂಬ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು.
ಆರ್ಥಿಕ ಭದ್ರತೆಯನ್ನು ಕಂಡು ಕೊಳ್ಳಬಹುದು: ಎಸ್. ಎಸ್ ಪರಮೇಶ್ ಅವರು ಕಳೆದ 2 ವರ್ಷಗಳಲ್ಲಿ 22 ಲಕ್ಷ ಆದಾಯವನ್ನು ಗಳಿಸಿದ್ದು, ಜೀವ ವೈವಿಧ್ಯತೆಯನ್ನು ಕಾಪಾಡುವುದರೊಂದಿಗೆ ರೈತರು ತಮ್ಮ ಆದಾಯವನ್ನೂ ದ್ವಿಗುಣಗೊಳಿಸಿಕೊಳ್ಳಬಹುದಾಗಿದೆ ಎಂದು ನಿರೂಪಿಸಿದ್ದಾರೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಈವರೆಗೆ ಒಂದು ಲಕ್ಷ ಸಸಿಗಳನ್ನು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ 31 ಸಾವಿರ ಕೃಷಿಕರಿಗೆ ವಿತರಿಸಲಾಗಿದೆ. ರಾಜ್ಯ ರೈತರು ಈ ವಿಶಿಷ್ಟ ಪ್ರಬೇಧದ ಹಲಸನ್ನು ಬೆಳೆಸುವ ಮೂಲಕ ಈ ತಳಿಯನ್ನು ಸಂರಕ್ಷಿಸುವುದಲ್ಲದೇ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳಬಹುದು ಎಂದು ಕರೆ ನೀಡಿದರು.
ಸಸಿ ಬೆಳೆಸಲು ಆಸಕ್ತಿ: ಶಿಕಾರಿಪುರದ ತಮ್ಮ ತೋಟದಲ್ಲಿ ಸಿದ್ದು ಹಲಸು ಸಸಿಗಳನ್ನು ಬೆಳೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳೆಸಲು ಆಸಕ್ತಿ ತೋರಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್.ಬಸವರಾಜು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಬಿ.ಎನ್.ಎಸ್ ಮೂರ್ತಿ, ತುಮಕೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಿ.ಹೆಚ್.ಇ.ಎಸ್. ಮುಖ್ಯಸ್ಥ . ಜಿ.ಕರುಣಾಕರನ್, ಹಾಗೂ ಸಿದ್ದು ಹಲಸು ಬೆಳೆದ ರೈತ ಎಸ್.ಎಸ್.ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಓದಿ: Supreme Court ನೇಮಿಸಿರುವ ಕಮಿಟಿ ಮಾಡಿರುವ ಆರೋಪ ಸುಳ್ಳು: ಕೋಡಿಹಳ್ಳಿ ಚಂದ್ರಶೇಖರ್