ಬೆಂಗಳೂರು: ಡಿಸೆಂಬರ್ 5 ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಅನರ್ಹ ಶಾಸಕರನ್ನು ಗೆಲ್ಲಿಸಿಕೊಳ್ಳುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಅನರ್ಹರ ಕ್ಷೇತ್ರಗಳ ಪ್ರವಾಸಕ್ಕೆ ಮುಂದಾಗಿದ್ದಾರೆ.
ಉಪ ಚುನಾವಣೆ ಸಿದ್ದತೆ ಸಭೆಯ ಬೆನ್ನಲ್ಲೆ ಅನರ್ಹ ಶಾಸಕರ ಪರ ಪ್ರಚಾರಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಜ್ಜಾಗಿದ್ದಾರೆ.
ನವೆಂಬರ್ 3 ರಂದು ಕಾಂಗ್ರೆಸ್ ಅನರ್ಹ ಶಾಸಕ ಡಾ.ಸುಧಾಕರ್ ಪ್ರತಿನಿಧಿಸುವ ಕ್ಷೇತ್ರ ಚಿಕ್ಕಬಳ್ಳಾಪುರದಿಂದ ಪ್ರಚಾರ ಕಾರ್ಯ ಆರಂಭಗೊಳ್ಳಲಿದ್ದು, ನವೆಂಬರ್ 7 ರಂದು ಬಿ.ಸಿ ಪಾಟೀಲ್ ಪ್ರತಿನಿಧಿಸುವ ಹಿರೇಕೆರೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಪ್ರಚಾರ ನಡೆಸಲಿದ್ದಾರೆ. ನವೆಂಬರ್ 10 ರಂದು ಅನರ್ಹ ಶಾಸಕ ಆನಂದ ಸಿಂಗ್ ಪ್ರತಿನಿಧಿಸುವ ಬಳ್ಳಾರಿ ವಿಜಯನಗರ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿರುವ ಸಿಎಂ, ನಂತರ ನವೆಂಬರ್ ತಿಂಗಳು ಪೂರ್ತಿ ಅನರ್ಹರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ನವೆಂಬರ್ 11 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಅಲ್ಲಿಯವರೆಗೂ ಸರ್ಕಾರಿ ಕಾರ್ಯಕ್ರಮಗಳು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಮೂಲಕ ಮತಯಾಚನೆ ಮಾಡಲಿರುವ ಸಿಎಂ, ನಂತರ ಖಾಸಗಿಯಾಗಿ ಚುನಾವಣಾ ಪ್ರಚಾರ ಸಭೆಗಳ ಮೂಲಕ ಅನರ್ಹರ ಪರ ಮತಯಾಚನೆ ಮಾಡಲಿದ್ದಾರೆ. 15 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕನಿಷ್ಟ 10 ಕ್ಷೇತ್ರಗಳನ್ನಾದರೂ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಸಿಎಂ ಬಿಎಸ್ವೈ, ಹೆಚ್ಚು ಸಂಖ್ಯೆಯಲ್ಲಿ ಅನರ್ಹರನ್ನು ಗೆಲ್ಲಿಸಿ, ಸರ್ಕಾರ ಸುಭದ್ರ ಮಾಡಿಕೊಳ್ಳಲು ಸಿಎಂ ಮುಂದಾಗಿದ್ದಾರೆ.