ಬೆಂಗಳೂರು: 78 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸರ್ಕಾರಿ ನಿವಾಸ ಕಾವೇರಿಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ಅಭಿಮಾನಿಗಳು, ಹಿತೈಷಿಗಳ ಸಮ್ಮುಖದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡರು.
ಕಾವೇರಿ ನಿವಾಸಕ್ಕೆ ಆಗಮಿಸಿದ ಸಿಎಂ ನಿವಾಸದಲ್ಲಿ ಪೂಜೆ ನೆರವೇರಿಸಿದರು. ನಂತರ ಪಕ್ಷದ ಮುಖಂಡರ ಜೊತೆ ಉಪಹಾರ ಸೇವಿಸಿ ಕೆಲ ಕಾಲ ಅನೌಪಚಾರಿಕ ಕುಶಲೋಪರಿ ವಿಚಾರಿಸಿದರು. ನಂತರ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದರು.
ಸಚಿವರಾದ ಜಗದೀಶ್ ಶೆಟ್ಟರ್, ವಿ ಸೋಮಣ್ಣ ಸೇರಿದಂತೆ ಪಕ್ಷದ ನಾಯಕರು ಕಾವೇರಿಗೆ ಆಗಮಿಸಿ ಸಿಎಂಗೆ ಶುಭ ಕೋರಿದರು, ಸಚಿವರು, ಶಾಸಕರು, ಆಪ್ತರು, ಬೆಂಬಲಿಗರಿಂದ ಶುಭಾಶಯ ಕೋರಿದರು. ಸಚಿವ ಶ್ರೀಮಂತ ಪಾಟೀಲ್ ಸಿಎಂಗೆ ಶುಭಾಶಯ ಕೋರಿ ಕಾಲು ಮುಟ್ಟಿ ಆಶೀರ್ವಾದ ಪಡೆದರು.
ಇನ್ನಷ್ಟು ಒಳ್ಳೆಯ ರಾಜಕಾರಣ ಮಾಡಲಿ: ಬಿ.ವೈ ವಿಜಯೇಂದ್ರ ಹಾರೈಕೆ...
ಇನ್ನಷ್ಟು ಕಾಲ ಆಯುರಾರೋಗ್ಯದೊಂದಿಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಇನ್ನಷ್ಟು ಒಳ್ಳೆಯ ರಾಜಕಾರಣ ಮಾಡಲಿ ಎನ್ನುವುದಷ್ಟೇ ಮಕ್ಕಳಾಗಿ ನಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ನಿರೀಕ್ಷೆ ಮಾಡುತ್ತೇವೆ ಎಂದು ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತೇನೆ. ಅವರ ಮಕ್ಕಳಾಗಿ ನಾವು ಅವರ ಆರೋಗ್ಯ ಚೆನ್ನಾಗಿರಬೇಕು ಎಂದು ಆಶಿಸುತ್ತೇವೆ. ಇನ್ನೂ ಕೂಡ ರಾಜ್ಯಕ್ಕೆ ಹೆಚ್ಚಿನ ಸೇವೆ ಅಗತ್ಯವಿದೆ. ಯಾವಾಗಲೂ ಹಸನ್ಮುಖಿಯಾಗಿ ಎಲ್ಲರ ಜೊತೆ ಒಟ್ಟಿಗೆ ಸೇರಿಸಿಕೊಂಡು ಇನ್ನೂ ಒಳ್ಳೆಯ ರಾಜಕಾರಣ ಮಾಡಬೇಕು ಎನ್ನುವ ಅಭಿಲಾಷೆ ಇದೆ ಎಂದಿದ್ದಾರೆ.