ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಸಕ ಮಂಜುನಾಥ್ ಅವರ ದಾಸರಹಳ್ಳಿ ಕ್ಷೇತ್ರದಲ್ಲಿ ಮಳೆಯಿಂದ ಹಾನಿ ಆಗಿದೆ. ಅದಕ್ಕೆ ಹಣ ಹೆಚ್ಚು ಬಿಡುಗಡೆ ಮಾಡಬೇಕು ಎಂದು ಕೇಳಿದರು. ಶಾಸಕ ಮಂಜುನಾಥ್ ಅವರನ್ನು ಕುಮಾರಸ್ವಾಮಿ ಕರೆದುಕೊಂಡು ಬಂದಿದ್ದರು. ಅರ್ಧಗಂಟೆ ಅದರ ಬಗ್ಗೆ ಚರ್ಚೆ ಮಾಡಿ ಕಳಿಸಿದ್ದೇನೆ ಎಂದರು. ಇದರಲ್ಲಿ ಯಾವುದೇ ರಾಜಕೀಯ ಭೇಟಿ ಇರಲಿಲ್ಲ. ಕೇವಲ ಅವರ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದು ಅಷ್ಟೇ ಎಂದು ತಿಳಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಬಿಎಸ್ವೈ ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿ
ಇದೇ ವೇಳೆ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಹಲವಾರು ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಮಳೆ, ನೆರೆ ವಿಚಾರವಾಗಿ ಮಾತಾಡುವುದಿದೆ ಎಂದರು.
ಡ್ರಗ್ಸ್ ವಿಚಾರದಲ್ಲಿ ನಮ್ಮ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ. ಇದರಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಡ್ರಗ್ಸ್ ದಂಧೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಖಚಿತ ಎಂದು ಸಿಎಂ ಸ್ಪಷ್ಟಪಡಿಸಿದರು.