ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜೀನಾಮೆ ನಂತರ ರಚನೆಯಾಗುವ ಹೊಸ ಬಿಜೆಪಿ ಸರ್ಕಾರದಲ್ಲಿ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ 'ಪವರ್ ಫುಲ್' ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಉಪ ಮುಖ್ಯಮಂತ್ರಿ ಪದವಿ ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಇಂಧನ, ಜಲಸಂಪನ್ಮೂಲ, ಹಣಕಾಸು, ಲೋಕೋಪಯೋಗಿ ಇಲಾಖೆಯಂಥ ಪ್ರಮುಖ ಇಲಾಖೆಗಳ ಖಾತೆಗಳನ್ನು ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿ ಭೇಟಿ ವೇಳೆ ಬಿಜೆಪಿ ಹೈಕಮಾಂಡ್ ಜತೆ ತಮ್ಮ ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿ ಪ್ರಮುಖ ಹುದ್ದೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ಉಪ ಮುಖ್ಯಮಂತ್ರಿ ಸ್ಥಾನ, ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಗಳನ್ನು ನೀಡಬೇಕೆನ್ನುವುದು ಮೊದಲ ಆದ್ಯತೆಯ ಬೇಡಿಕೆಯಾಗಿದೆಯಂತೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಇಂಧನ, ಜಲಸಂಪನ್ಮೂಲ ಇಲಾಖೆಯಂಥ ಮಹತ್ವದ ಖಾತೆಗಳನ್ನು ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಜಾಹುಲಿ ರಾಜೀನಾಮೆಗೆ ಹೆಚ್ಚು ಸಮಯ ನೀಡದ ಹೈಕಮಾಂಡ್: ತರಾತುರಿ ನಿರ್ಧಾರಕ್ಕೆ ಕಾರಣ?
ಸಿಎಂ ಯಡಿಯೂರಪ್ಪ ರಾಜೀನಾಮೆ ನಂತರ ಅವರ ಪುತ್ರ ಬಿ.ಎಸ್ ವಿಜಯೇಂದ್ರ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಉತ್ತಮ ಸ್ಥಾನ ಮಾನ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಭರವಸೆ ನೀಡಿದೆ ಎಂದು ಹೇಳಲಾಗಿದೆ. ಆದರೆ ನಿರ್ದಿಷ್ಟವಾಗಿ ಯಾವ ಹುದ್ದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. 'ಈಟಿವಿ ಭಾರತ'ಕ್ಕೆ ಲಭ್ಯವಾಗಿರುವ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಸ್ಥಾನ ಇಲ್ಲವೇ ಕ್ಯಾಬಿನೆಟ್ ದರ್ಜೆಯ ಸಚಿವ ಪದವಿ ನೀಡಿ ಇಂಧನ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಲಿಂಗಾಯತ ಸಮುದಾಯದ ವ್ಯಕ್ತಿ ಸಿಎಂ ಆದರೆ ವಿಜಯೇಂದ್ರಗೆ ಡಿಸಿಎಂ ಡೌಟು
ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾಗುವ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ, ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದು ಕಷ್ಟವಾಗುತ್ತದೆ. ಒಂದೇ ಸಮುದಾಯಕ್ಕೆ ಎರಡೆರಡು ಪ್ರಮುಖ ಹುದ್ದೆ ನೀಡಲಾಗದು ಎನ್ನುವ ಕಾರಣವೊಡ್ಡಿ ವಿಜಯೇಂದ್ರ ಅವರಿಗೆ ಡಿಸಿಎಂ ನೀಡುವುದರ ಬಗ್ಗೆ ಅನುಮಾನ ಮೂಡಲಿದೆ.
ಲಿಂಗಾಯತರನ್ನು ಹೊರತುಪಡಿಸಿ ಉಳಿದ ಜನಾಂಗಕ್ಕೆ ಸೇರಿದ ಬ್ರಾಹ್ಮಣ, ಒಕ್ಕಲಿಗ ಅಥವಾ ಇನ್ನಿತರ ಸಮುದಾಯಕ್ಕೆ ಸೇರಿದ ಶಾಸಕರನ್ನು ಮುಖ್ಯಮಂತ್ರಿಯಾಗಿ ಹೈಕಮಾಂಡ್ ಆಯ್ಕೆ ಮಾಡಿದರೆ, ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಉಪಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ವಿಜಯೇಂದ್ರ ಅವರಿಗೆ ಮಹತ್ವದ ಖಾತೆಗಳು ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.
ರಾಜ್ಯಾಧ್ಯಕ್ಷ ಹುದ್ದೆ ಮೇಲೂ ಕಣ್ಣು?
ಉಪಮುಖ್ಯಮಂತ್ರಿ ಅಥವಾ ಸಚಿವ ಸಚಿವ ಸ್ಥಾನಕ್ಕಿಂತಲೂ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೂ ವಿಜಯೇಂದ್ರ ಅವರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಕಾರ್ಯನಿರ್ವಹಿಸುತ್ತಿರುವ ಅವರು, ಬಿಜೆಪಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಮುಖ್ಯಮಂತ್ರಿಯಾಗಬಹುದು ಎನ್ನುವ ದೂರದೃಷ್ಟಿಯ ರಾಜಕೀಯ ಉದ್ದೇಶವನ್ನು ಹೊಂದಿದ್ದಾರೆಂದು ಹೇಳಲಾಗಿದೆ. ಆದರೆ ಬಿಜೆಪಿ ಹೈಕಮಾಂಡ್ ಈಗಲೇ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿ ನೀಡುವ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ ಎಂದೂ ಸಹ ಹೇಳಲಾಗ್ತಿದೆ.