ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಿಎಂ, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನಕ್ಕೆ ಸಾಂಕೇತಿಕವಾಗಿ ಇಂದು ಚಾಲನೆ ನೀಡಲಾಗಿದೆ. ಕೋವಿಡ್ ವಿರುದ್ಧದ ಸಮರದಲ್ಲಿ ಒಂದು ಮಹತ್ವದ ದಿನವಾಗಿದೆ. ಇಂದಿನಿಂದ ಭಾರತ ಸರ್ಕಾರದ ಸೂಚನೆಯಂತೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭ ಆಗಲಿದೆ ಎಂದರು.
ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದಿಂದ 3 ಲಕ್ಷ ಲಸಿಕೆ ಲಭ್ಯವಾಗಿದ್ದು, ರಾಜ್ಯ ಸರ್ಕಾರದ ಬಳಿ ಒಂದು ಲಕ್ಷ ಲಸಿಕೆ ಲಭ್ಯವಿದೆ. ಇದೆಲ್ಲವನ್ನು ಇಂದಿನಿಂದ ಕೊಡಲು ಪ್ರಾರಂಭಿಸಲಾಗುವುದು. ಇದಲ್ಲದೆ 2 ಕೋಟಿ ಲಸಿಕೆ ಖರೀದಿಗೆ ಹಣ ಕೊಟ್ಟಾಗಿದೆ. ಈ ವಯೋಮಾನದ 3.26 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶವಿದೆ ಎಂದು ಸಿಎಂ ತಿಳಿಸಿದರು.
ಕೋವಿಡ್ 2ನೇ ಅಲೆ ವಿರುದ್ಧದ ಹೋರಾಟಕ್ಕೆ ಇದು ಅಗತ್ಯವಾಗಿದೆ. ಸ್ವದೇಶಿ ನಿರ್ಮಿತ 2 ಲಸಿಕೆ ಸದ್ಯ ಲಭ್ಯವಿದ್ದು, ಈ ತಿಂಗಳಲ್ಲಿ ಇನ್ನೊಂದು ಲಸಿಕೆ ಮಾರುಕಟ್ಟೆಗೆ ಮುಕ್ತವಾಗಲಿದೆ. ಕರ್ನಾಟಕದಲ್ಲಿ ಈವರೆಗೆ 96.35 ಲಕ್ಷ ಲಸಿಕೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು 100 ರೂ. ಸೇವಾಶುಲ್ಕ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚು ಹಣ ತೆಗೆದುಕೊಂಡಲ್ಲಿ ತೀವ್ರ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಲಭ್ಯತೆ ಆಧಾರದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಹಂತಹಂತವಾಗಿ ಮುಂದುವರೆಸಲಾಗುವುದು. ಸದ್ಯ ಇರುವ 4 ಲಕ್ಷ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು ಎಂದು ಹೇಳಿದರು.
ಲಸಿಕೆ ಕೊರತೆ ಇರುವುದರಿಂದ ತರಾತುರಿಯಲ್ಲಿ ವಿತರಣೆ ಆರಂಭಿಸಿರುವುದು ಯಾಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸದ್ಯ ಬಂದಿರುವ ಲಸಿಕೆಯನ್ನು ಜನರಿಗೆ ವಿತರಿಸಲು ಆರಂಭಿಸಲಾಗುವುದು. ಇನ್ನೆರಡು ಮೂರು ದಿನದಲ್ಲಿ ಹೆಚ್ಚಿನ ಲಸಿಕೆ ಬರಲಿವೆ. ವಿದೇಶಗಳಿಂದಲೂ ಬರುತ್ತಿದೆ. 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುವುದು. ಇನ್ನೆರಡು ಮೂರು ದಿನದಲ್ಲಿ ಎಲ್ಲ ಅನುಮಾನಗಳಿಗೂ ಉತ್ತರ ಸಿಗಲಿದೆ. ವಿದೇಶಗಳಿಂದ ಲಸಿಕೆ ಬಂದು ತಲುಪಲಿದೆ ಎಂದರು.
ರೆಮ್ಡಿಸಿವರ್, ಆಮ್ಲಜನಕವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಕೆಲಸ ಕಣ್ಣಿಗೆ ಬಿದ್ದರೆ ಅಂತಹವರನ್ನು ಕೆಲಸದಿಂದ ತೆಗೆದುಹಾಕಲಾಗುವುದು. 24 ಗಂಟೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಕೊರತೆ ಬಗ್ಗೆ ಇಂದು ಡಾ.ದೇವಿಶೆಟ್ಟಿ ಸೇರಿದಂತೆ ನಾಲ್ಕು ಗಂಟೆಗೆ ಪ್ರಮುಖರ ಸಭೆ ಇದೆ. ಈ ವೇಳೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.
ಓದಿ: ಬೆಂಗಳೂರಿಗೆ ಕೋವಿಡ್ ಕಂಟಕ.. ರಾಜಧಾನಿಯಲ್ಲಿ 21,602 ಸೋಂಕಿತರು ಪತ್ತೆ!