ಬೆಂಗಳೂರು: ಹೈಕಮಾಂಡ್ ವಿಶ್ವಾಸವಿಟ್ಟು ನನಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ. ಅವರು ಸೂಚಿಸಿದ ತಕ್ಷಣ ರಾಜೀನಾಮೆ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ, "ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ ಅಲ್ಲಿಯವರೆಗೂ ನಾನು ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ. ಆದರೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇದೆ" ಎಂದಿದ್ದು, ಮೊದಲ ಬಾರಿ ರಾಜೀನಾಮೆ ವಿಷಯ ಪ್ರಸ್ತಾಪಿಸಿದ್ದಾರೆ.
"ನಾಯಕತ್ವ ಬದಲಾವಣೆ ಸೇರಿದಂತೆ ಕೆಲವರ ಟಿಕೆಗಳ ಕುರಿತು ಯಾವುದರ ಬಗ್ಗೆಯೂ ಏನೂ ಪ್ರತಿಕ್ರಿಯೆ ನೀಡಲ್ಲ. ಎಲ್ಲಿಯವರೆಗೆ ದೆಹಲಿಯ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಡುತ್ತದೆಯೋ ಅಲ್ಲಿಯವರೆಗೂ ನಾನು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಯಡಿಯೂರಪ್ಪನವರೇ ನೀವು ಆಳ್ವಿಕೆ ನಡೆಸಿದ್ದ ಸಾಕು ಎಂದು ಹೇಳಿದರೆ ಆ ಕ್ಷಣವೇ ನಾನು ರಾಜೀನಾಮೆ ಕೊಟ್ಟು ನಮ್ಮ ರಾಜ್ಯದ ಅಭಿವೃದ್ಧಿಗೆ ಹಗಲು-ರಾತ್ರಿ ಕೆಲಸ ಮಾಡುತ್ತೇನೆ. ಆದ್ದರಿಂದ ನಮ್ಮಲ್ಲಿ ಯಾವುದೇ ಗೊಂದಲದಲ್ಲಿ ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಉಳಿದದ್ದು ಹೈಕಮಾಂಡ್ಗೆ ಬಿಟ್ಟದ್ದು" ಎಂದರು.
ಸಿ.ಪಿ ಯೋಗೀಶ್ವರ್, ಅರವಿಂದ ಬೆಲ್ಲದ್ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, "ನಾನು ಯಾರ ಬಗ್ಗೆಯೂ ಯಾವುದೇ ಟೀಕೆ ಕುರಿತು ಮಾತನಾಡುವುದಿಲ್ಲ. ಆದರೆ ರಾಜ್ಯದಲ್ಲಿ ನನಗೆ ಪರ್ಯಾಯ ವ್ಯಕ್ತಿ ಪಕ್ಷದಲ್ಲಿ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ, ದೇಶದಲ್ಲಿ ಪರ್ಯಾಯ ವ್ಯಕ್ತಿಗಳು ಯಾವಾಗಲೂ ಇದ್ದೇ ಇರುತ್ತಾರೆ. ಆದ್ದರಿಂದ ಕರ್ನಾಟಕದಲ್ಲಿ ಪರ್ಯಾಯ ವ್ಯಕ್ತಿ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಕೇಂದ್ರದ ನಾಯಕರು ಎಲ್ಲಿವರೆಗೂ ನನ್ನ ಮೇಲೆ ವಿಶ್ವಾಸ ಇಟ್ಟಿರುತ್ತಾರೋ ಅಲ್ಲಿವರೆಗೂ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ" ಎಂದು ಹೇಳಿದರು.