ಬೆಂಗಳೂರು: ಕೊರೊನಾ ನಿಯಂತ್ರಣ ಕುರಿತು ಬೆಂಗಳೂರಿನ ಶಾಸಕರು ಹಾಗೂ ಸಚಿವರ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಲಾಕ್ಡೌನ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಆರ್ಥಿಕ ಸಮಸ್ಯೆ ಕಾರಣ ಮುಂದೊಡ್ಡಿ ಲಾಕ್ಡೌನ್ ಜಾರಿಯನ್ನು ನಿರಾಕರಣೆ ಮಾಡಿದ್ದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬೆಂಗಳೂರಿನ ಶಾಸಕರು, ಸಚಿವರ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಲ್ಲರೂ ಸಲಹೆ ನೀಡುವ ಜೊತೆಯಲ್ಲಿ ಸಮುದಾಯಕ್ಕೆ ಹರಡುವ ಆತಂಕ ವ್ಯಕ್ತಪಡಿಸಿದರು. ಲಾಕ್ಡೌನ್ ಜಾರಿ ಮಾಡುವುದು ಸೂಕ್ತ ಎಂದು ತಿಳಿಸಿದರು. ಆದರೆ ಲಾಕ್ಡೌನ್ಗೆ ಸರ್ಕಾರ ಒಪ್ಪಿಗೆ ನೀಡದ ಹಿನ್ನಲೆಯಲ್ಲಿ ಸಭೆಯಿಂದ ನಿರ್ಗಮಿಸಿದರು.
ಸಭೆ ಮುಗಿಸಿ ಹೊರಡುವ ವೇಳೆ ಮಾತನಾಡಿದ ಶಾಸಕ ಎನ್.ಎ. ಹ್ಯಾರಿಸ್, ಕಮ್ಯುನಿಟಿ ಸ್ಪ್ರೆಡ್ ಶುರುವಾಗಿದ್ದರೂ ಲಾಕ್ಡೌನ್ ಮಾಡಲ್ಲವೆಂದು ಸಭೆಯಲ್ಲಿ ಸರ್ಕಾರ ಹೇಳಿದೆ. ನಾವು ಪ್ರತಿಯೊಬ್ಬರ ಪ್ರಾಣ ಕಾಪಾಡಬೇಕಿದೆ. ಲಾಕ್ಡೌನ್ ಮಾಡಲ್ಲ, ಎಕನಾಮಿಕ್ ಕ್ರೈಸಿಸ್ ಆಗುತ್ತದೆ ಅಂದ್ರೆ ಏನು ಮಾಡಲಿಕ್ಕೆ ಆಗಲ್ಲ, ಮಳೆ ಬಂದ ಮೇಲೆ ಕೊಡೆ ಹಿಡಿಯೋ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಭೆ ಕರೆದಿದ್ದಕ್ಕೆ ನಾವು ಸಿಎಂಗೆ ಧನ್ಯವಾದ ಹೇಳುತ್ತೇವೆ, ಆದರೆ ಸಭೆ ಸರಿಯಾಗಿ ಆಗಿಲ್ಲ ಎಂದಿದ್ದಾರೆ. ಇದು ನನಗ್ಯಾಕೋ ಸರಿ ಅನಿಸುತ್ತಿಲ್ಲ, ವೈಯಕ್ತಿಕವಾಗಿ ನಾನು ಲಾಕ್ಡೌನ್ ಮಾಡಿ ಎಂದಿದ್ದೇನೆ. ಆದರೆ ಲಾಕ್ಡೌನ್ ಮಾಡಲ್ಲ, ಬೆಡ್ ಜಾಸ್ತಿ ಮಾಡುತ್ತೇವೆ ಎನ್ನುತ್ತಾರೆ. ಬೆಡ್ ಜಾಸ್ತಿ ಮಾಡುತ್ತಾರೆ ಅಂದರೆ ಕೊರೋನಾ ಜಾಸ್ತಿ ಆಗುತ್ತದೆ ಅಂತ ತಾನೆ. ಸಲಹೆ ತೆಗೆದುಕೊಂಡಿದ್ದಾರೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಾವು ಲಾಕ್ಡೌನ್ ಮಾಡುತ್ತೀರಾ? ಏನ್ ಮಾಡುತ್ತೀರಾ? ಎಂಬ ಬಗ್ಗೆ ಸ್ಪಷ್ಟನೆ ಕೊಡಿ ಎಂದೆವು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಚಿವ ಅಶೋಕ್ ಕೂಡಾ ಮಾಹಿತಿ ನೀಡಿದರು. ಸರ್ಕಾರಕ್ಕೆ ಲಾಕ್ಡೌನ್ ಮಾಡೋ ಮನಸಿಲ್ಲ. ಅವರು ಇರೋ ವಾತಾವರಣದಲ್ಲಿ ಕೊರೊನಾ ಕಂಟ್ರೋಲ್ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಜನ ದಟ್ಟಣೆ ಕಡಿಮೆ ಮಾಡಿ, ರ‍್ಯಾಂಡಮ್ ಟೆಸ್ಟ್ ಮಾಡಿಸಿ ಎಂದು ಹೇಳಿದ್ದೇವೆ ಎಂದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಸರ್ಕಾರಕ್ಕೆ ಕೆಲ ಸಲಹೆ ಕೊಡಲಾಗಿದೆ. ಜನಸಾಮಾನ್ಯರಿಗೆ ಬಹಳ ತೊಂದರೆ ಆಗಿದೆ. ಈಗಾಗಲೇ ಕೋವಿಡ್ಗೆ ಮೀಸಲಿಟ್ಟ ಆಸ್ಪತ್ರೆಗಳು ತುಂಬಿ ಹೋಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ಚಿಕಿತ್ಸೆ ತೆಗೆದುಕೊಳ್ಳಲು ಆಗಲ್ಲ. ವೆಂಟಿಲೇಟರ್ಗಳ ಅಗತ್ಯ ಇದೆ, ಒಬ್ಬ ರೋಗಿಯನ್ನು ಕರೆದುಕೊಂಡು ಬರಲು ಅರ್ಧ ದಿನ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಟೆಸ್ಟಿಂಗ್ ಸೆಂಟರ್ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಕೊರೊನಾ ಫಲಿತಾಂಶ ಬರಲು ಮೂರ್ನಾಲ್ಕು ದಿನ ತೆಗೆದುಕೊಂಡರೆ ಕಷ್ಟ. ಅಷ್ಟರಲ್ಲಿ ಟೆಸ್ಟ್ಗೆ ಒಳಗಾದ ವ್ಯಕ್ತಿ ಹಲವು ಕಡೆ ಓಡಾಡಿ ಬಂದಿರುತ್ತಾನೆ. ತಜ್ಞರ ಜೊತೆ ಚರ್ಚಿಸಿ ಲಾಕ್ಡೌನ್ ಬಗ್ಗೆ ನಿರ್ಧಾರ ಮಾಡಿ ಲಾಕ್ಡೌನ್ ಜಾರಿಗೊಳಿಸಿದರೆ ಬಡವರಿಗೆ ಸಹಾಯ ಕೂಡಾ ಮಾಡಬೇಕು ಎಂದು ಹೇಳಿದರು.
ಶಾಸಕರ ಭವನದ ಎಎಸ್ಐ ಆ್ಯಂಬುಲೆನ್ಸ್ಗೆ 6 ಗಂಟೆ ಕಾದಿದ್ದಾರೆ. ಆರೋಗ್ಯ ಸಚಿವರೇ ಸಾಮಾಜಿಕ ಅಂತರ ಮರೆತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಮೊನ್ನೆ ಶ್ರೀರಾಮುಲು ಇನ್ಚಾರ್ಜ್, ಇಂದು ಅಶೋಕ್ ಇನ್ಚಾರ್ಜ್. ನಾವು ಯಾರನ್ನು ಕೇಳಬೇಕೆಂದು ಸರ್ಕಾರಕ್ಕೆ ರಿಜ್ವಾನ್ ಅರ್ಷದ್ ಪ್ರಶ್ನಿಸಿದರು.