ಬೆಂಗಳೂರು: ಇವತ್ತಿನ ಪರಿಸ್ಥಿತಿಯಲ್ಲಿ 6ನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ. ಹಠ ಬಿಟ್ಟು ಬಂದು ಕರ್ತವ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನಿಂದ ನಿಮ್ಮ ಬಸ್‌ಗಳನ್ನು ಓಡಾಡಿಸಲು ಶುರು ಮಾಡಬೇಕು. ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವಾಗ ಈ ರೀತಿ ಹಠ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ನೀವೇ ಯೋಚನೆ ಮಾಡಿ. ಮತ್ತೊಮ್ಮೆ ಮನವಿ ಮಾಡುತ್ತೇನೆ, ಹಠ ಬಿಟ್ಟು ಬನ್ನಿ ಎಂದರು.
ಆದಾಯದಲ್ಲಿ ಶೇ.86 ರಷ್ಟು ಭಾಗ ಸರ್ಕಾರಿ ನೌಕರಿಗೆ ವೇತನ, ಪಿಂಚಣಿ ಇತರೆಗೆ ಖರ್ಚಾಗುತ್ತಿದೆ. ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಹಠಕ್ಕೆ ಬೀಳಬಾರದು. ಈಗಾಗಲೇ 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಅದರಲ್ಲಿ ಲೋಪದೋಷ ಇದ್ದರೆ ಹೇಳಿ ಸರಿಪಡಿಸೋಣ. ಅದನ್ನ ಬಿಟ್ಟು ಈ ರೀತಿ ಹಠ ಮಾಡಬಾರದು. ಇವತ್ತಿನ ಪರಿಸ್ಥಿತಿಯಲ್ಲಿ 6 ನೇ ವೇತನ ಆಯೋಗ ಶಿಫಾರಸು ಸಾಧ್ಯನೇ ಇಲ್ಲ. ಸಾಧ್ಯವೇ ಇಲ್ಲ ಅಂತಾದ್ಮೇಲೆ ಹಠ ಮಾಡೋದು ಸರಿಯಲ್ಲ. ಈಗಲಾದರೂ ಅರ್ಥ ಮಾಡಿಕೊಂಡು ಕೆಲಸಕ್ಕೆ ಬನ್ನಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಡೆದುಕೊಳ್ಳಿ ಎಂದು ಹೇಳಿದರು.
ಇದನ್ನೂ ಓದಿ: ನೈಟ್ ಕರ್ಫ್ಯೂ ಜಾರಿಯಿಂದ ಯಾವುದೇ ಪ್ರಯೋಜನವಿಲ್ಲ: ಡಿ.ಕೆ.ಶಿವಕುಮಾರ್
ಸಾರಿಗೆ ನೌಕರರ ಜೊತೆ ಸರ್ಕಾರ ಮಾತುಕತೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಯಾರ ಜೊತೆ ಮಾತನಾಡಬೇಕು ಎಂದು ಪ್ರಶ್ನಿಸಿ ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ಜೊತಗೆ ಮಾತುಕತೆ ಸಾಧ್ಯವಿಲ್ಲ ಎನ್ನುವ ಸುಳಿವು ನೀಡಿದರು.