ಬೆಂಗಳೂರು: ಗ್ರಾಮಗಳ ಅಭಿವೃದ್ಧಿಯಿಂದಲೇ ನಾಡಿನ ಅಭಿವೃದ್ಧಿ ಸಾಧ್ಯ. ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಸ್ಥಾಪಿಸುವುದು ನಮ್ಮ ಗುರಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ನಡೆಯುತ್ತಿರುವ ಡಿಸಿಗಳು, ಸಿಇಓಗಳ ಜೊತೆಗಿನ ಸಭೆಯಲ್ಲಿ ಪ್ರಾರಂಭಿಕ ಭಾಷಣ ಮಾಡಿದ ಅವರು, ಕೋವಿಡ್ ನಂತರ ಮೊದಲ ಬಾರಿಗೆ ನಿಮ್ಮೊಂದಿಗೆ ಸಭೆ ನಡೆಸುತ್ತಿದ್ದೇನೆ. ಜಿಲ್ಲಾಡಳಿತ ಸದಾ ಗ್ರಾಮ ಮುಖಿಯಾಗಿರಬೇಕು. ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಸ್ಥಾಪಿಸುವುದು ನಮ್ಮ ಗುರಿ. ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥವಾಗಬೇಕು. ಹೀಗಿದ್ದಲ್ಲಿ ರಾಜಧಾನಿಗೆ ಜನರು ಬರುವಂತದ್ದು ಕಡಿಮೆ ಆಗುತ್ತದೆ. ತಳ ಮಟ್ಟದ ಆಡಳಿತ ಯಂತ್ರ ಕ್ರಿಯಾಶೀಲವಾಗಬೇಕು. ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಡಿಸಿಗಳದ್ದು.
ಕಳೆದ 10 ತಿಂಗಳಿಂದ ಬರ, ಪ್ರವಾಹ, ಕೋವಿಡ್ನಂತಹ ಸಮಸ್ಯೆ ಎದುರಿಸಿದ್ದೀರಿ. ಇದಕ್ಕೆಲ್ಲಾ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು. ಆತ್ಮ ನಿರ್ಭರ್ ಭಾರತ ನಿರ್ಮಾಣ ಮಾಡುವಂತೆ ಪ್ರಧಾನಿಗಳ ಕರೆಗೆ ನಾವು ಕಾರ್ಯ ನಿರ್ವಹಣೆ ಮಾಡಬೇಕು. ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಬೇಕು. ಈ ನಿಟ್ಟಿನಲ್ಲಿ ಡಿಸಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ನೀವೇ ಸರ್ಕಾರದ ಮುಖವಾಣಿ ಇದ್ದಂತೆ. ನೀವು ಆಸಕ್ತಿ ವಹಿಸಿ, ಜನಪರ ಕಾಳಜಿ ವಹಿಸಿ. ಇದರಿಂದ ನಿಮಗೂ ಗೌರವ, ಸರ್ಕಾರಕ್ಕೂ ಗೌರವ. ಸರ್ಕಾರದ ಆಶಯ, ಕಾರ್ಯಕ್ರಮಗಳು, ತಳ ಹಂತದ ನಾಗರೀಕನಿಗೂ ತಲುಪಿಸುವ ಜವಬ್ದಾರಿ ನಿಮ್ಮದು. ಕೋವಿಡ್ ಬಳಿಕದ ಈ ಸಮಯದಲ್ಲಿ ನಿಮ್ಮಿಂದ ಹೆಚ್ಚು ನಿರೀಕ್ಷೆ ಹೊಂದಲಾಗಿದೆ. ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ, ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ. ಸರ್ಕಾರ ಸದಾ ನಿಮ್ಮ ಬೆಂಬಲಕ್ಕೆ ಇರುತ್ತದೆ ಎಂದು ಸಿಎಂ ಅಭಯ ನೀಡಿದರು.
ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ ಸರ್ಕಸ್: ರಾತ್ರಿ ಹಿರಿಯ ಸಚಿವರೊಂದಿಗೆ ಸಿಎಂ ಸಭೆ?
ಕುಡಿಯುವ ನೀರು, ಜಮೀನು ಸಮಸ್ಯೆ, ಸ್ವಚ್ಛತೆ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಮೂಲಕ ಜನರು ನೆಮ್ಮದಿಯಿಂದ ಜೀವನ ನಡೆಸಲು ಕ್ರಮ ವಹಿಸಬೇಕು. ಶಾಲೆಗಳು ಆರಂಭವಾಗಿವೆ, ವಿದ್ಯಾರ್ಥಿಗಳು, ಪೋಷಕರ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು. ಶಾಲೆಗಳ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಉದ್ಭವಾಗದಂತೆ ಕ್ರಮ ವಹಿಸಿ. ಎಸ್ಸಿ, ಎಸ್ಟಿ, ಓಬಿಸಿ ವಿದ್ಯಾರ್ಥಿಗಳ ನಿಲಯಗಳಲ್ಲಿ ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಉನ್ನತ ಮಟ್ಟದ ಶುಚಿಯಾದ ಆಹಾರ ಒದಗಿಸಲು ಕ್ರಮ ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ಕ್ರಮ ವಹಿಸಿ. ಶಾಲೆ ನಡೆಯದ ಕಾರಣ ಬಾಲ್ಯ ವಿವಾಹ ಪ್ರಕರಣ ಹೆಚ್ಚಿವೆ. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಕೋವಿಡ್ ಲಸಿಕೆ ಲೋಪದೋಷಗಳಿಗೆ ಆಸ್ಪದ ಕೊಡಬೇಡಿ:
ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಗೊಳಿಸುವ ಹೊಣೆಗಾರಿಕೆ ನಿಮ್ಮದು. ಲಸಿಕೆ ಲೋಪದೋಷಗಳಿಗೆ ಆಸ್ಪದ ಕೊಡಬೇಡಿ. ಇದರ ಬಗ್ಗೆ ಹೆಚ್ಚಿನ ಮುಂಜಾಗ್ರತಾ ವಹಿಸಲು ಕ್ರಮ ವಹಿಸಬೇಕು ಎಂದರು.
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಣೆಗೆ ಅನಗತ್ಯವಾಗಿ ವಿಳಂಬ ಆಗದ ರೀತಿ ಕ್ರಮ ವಹಿಸಿ. ಬೆಳೆ ಹಾನಿ ವಿವರಣೆಗಳನ್ನು ಪರಿಹಾರ ತಂತ್ರಾಂಶದಲ್ಲಿ ತ್ವರಿತವಾಗಿ ದಾಖಲಿಸಬೇಕು. ಅಂತರ್ಜಲ ಮಟ್ಟ ಹೆಚ್ಚಿಸಲು ಆದ್ಯತೆ ಕೊಡಿ. ಬೇಸಿಗೆ ಕಾಲ ಶುರುವಾಗುತ್ತಿದೆ, ಹೀಗಾಗಿ ಕುಡಿಯುವ ನೀರು ಸಮಸ್ಯೆ ಬಗ್ಗೆ ಕ್ರಮ ವಹಿಸಿ. ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ನೀರು ಪೂರೈಸಿ. ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಿ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಕ್ರಮ ವಹಿಸಿ. ಭೂ ಸ್ವಾಧೀನ ಪ್ರಕರಣ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು.
ಜಿಲ್ಲೆಯ ಆಡಳಿತ ಯಂತ್ರ ಚುರುಕು ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು, ಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಬೇಕು. ಈ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸಲು ಎಚ್ಚರಿಕೆ ವಹಿಸಬೇಕು ಎಂದರು.
ಅನುದಾನ ವೆಚ್ಚ ಕುರಿತು ಅವಲೋಕನ ತಂತ್ರಾಂಶ ಬಿಡುಗಡೆ:
ಇದೇ ವೇಳೆ ಸಿಎಂ ಅನುದಾನ ವೆಚ್ಚ ಕುರಿತು ಅವಲೋಕನ ತಂತ್ರಾಂಶ ಬಿಡುಗಡೆ ಮಾಡಿದರು. 39 ಇಲಾಖೆಗಳ 1800 ಯೋಜನೆಗಳಿಗಾಗಿ ಅನುಷ್ಠಾನ ಅಧಿಕಾರಿಗಳಿಗಾಗಿ ಬಿಡುಗಡೆ ಮಾಡಲಾದ ಹಣ ಮತ್ತು ವೆಚ್ಚದ ವಿವರ ಹೊಂದಿರುವ ತಂತ್ರಾಂಶ ಇದಾಗಿದೆ. ಈ ಮೂಲಕ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ.