ಬೆಂಗಳೂರು: ರಾಜಧಾನಿ ಅಭಿವೃದ್ಧಿ ಬಗ್ಗೆ ರಚಿಸಿರುವ ಮಿಷನ್-2022 ಕಾಮಗಾರಿ ಕುರಿತು ಆರು ತಿಂಗಳಿಗೊಮ್ಮೆ ಸುದ್ದಿಗೋಷ್ಠಿ ನಡೆಸಿ ಪ್ರಗತಿ ಮನವರಿಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಸಂವಾದ ನಡೆಸಿ ಮಾತನಾಡಿದ ಅವರು, ಮಾಧ್ಯಮಗಳ ಜೊತೆ ಸ್ಥಳ ಪರಿಶೀಲನೆ ಮಾಡಲಾಗುತ್ತದೆ. ಬಜೆಟ್ನಲ್ಲಿ ಅಗತ್ಯ ಹಣ ತೆಗೆದಿರಿಸಲಾಗಿದ್ದು, ಈಗಾಗಲೇ ಕಾಮಗಾರಿಗಳ ಅನುಷ್ಠಾನಕ್ಕೆ ಏಜೆನ್ಸಿ ನಿಗದಿಯಾಗಿದೆ. ಹಣಕಾಸು ಕೊರತೆಯಾಗದೆ ಎರಡು ವರ್ಷದಲ್ಲಿ ನಮ ಗುರಿ ತಲುಪಲಿದ್ದೇವೆ. ನೀಡಿರುವ ಭರವಸೆಯಲ್ಲಿ ಯಾವುದನ್ನೂ ಬಿಡುವುದಿಲ್ಲ, ಅಗತ್ಯವಿದ್ದರೆ ಸೇರಿಸಲಿದ್ದೇವೆ ಎಂದು ಭರವಸೆ ನೀಡಿದರು.
ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶವಿಲ್ಲ:
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಬಿಬಿಎಂಪಿ ಚುನಾವಣೆ ಬಗ್ಗೆ ಬಿಲ್ ಪಾಸ್ ಆಗಿದೆ. ಕೆಎಂಸಿ ಕಾಯ್ದೆಯಂತೆ ಈವರೆಗೂ ಚುನಾವಣೆ ನಡೆಸಲಾಗುತ್ತಿತ್ತು. ಆದರೆ ಜನಸಂಖ್ಯೆ ಕೋಟಿ ದಾಟಿದ ಹಿನ್ನೆಲೆ ಪ್ರತ್ಯೇಕ ಕಾಯ್ದೆ ತಂದು ಚುನಾವಣೆಗೆ ಹೋಗುತ್ತಿದ್ದೇವೆ. ಪರಿವರ್ತನೆ, ಬದಲಾವಣೆ ಕಾರಣಕ್ಕೆ ಕಾಯ್ದೆ ತರಲಾಗಿದೆಯೇ ಹೊರತು ಚುನಾವಣೆ ಮುಂದೂಡಿಕೆ ಮಾಡಲು ಅಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಸಿಎಂ ನಗರ ಪ್ರದಕ್ಷಿಣೆ ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದೆ. ಮುಂದಿನ ದಿನದಲ್ಲಿ ಮತ್ತೆ ಆರಂಭಿಸಲಾಗುತ್ತದೆ ಎಂದರು.
ಓದಿ: ಮಿಷನ್ ಬೆಂಗಳೂರು 2022 ಕ್ಕೆ ಹಣಕಾಸು ಕೊರತೆಯಾಗದಂತೆ ಕ್ರಮ: ಸಿಎಂ ಬಿಎಸ್ವೈ
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಕಾಲಮಿತಿಯಲ್ಲಿ ಸ್ಮಾರ್ಟ್ ಕಾಮಗಾರಿ ಮುಗಿಸಲಾಗುತ್ತದೆ. ಏಳು ಸ್ಮಾರ್ಟ್ ಸಿಟಿ ಯೋಜನೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮಳೆ, ಕೋವಿಡ್ ಕಾರಣಕ್ಕೆ ವಿಳಂಬವಾಗಿದೆ. ಆದರೂ ಬೇಗ ಮುಗಿಸಬೇಕು ಎಂದು ಈಗ ಸೂಚನೆ ಕೊಡಲಾಗಿದೆ. ಮಾರ್ಚ್ ವೇಳೆಗೆ ಮುಗಿಸುವ ಜವಾಬ್ದಾರಿ ನನ್ನದು ಎಂದರು.