ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲ ಇರುವವರೆಗೆ ನನ್ನ ವಿರುದ್ಧ ನೂರು ಆರೋಪಗಳು ಕೇಳಿ ಬಂದರೂ ಎದುರಿಸಿ ಗೆದ್ದು ಬರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತನ್ನು ನೆನಪಿಸಿಕೊಂಡ ಅವರು, ಡಿನೋಟಿಫಿಕೇಷನ್ ಆರೋಪದ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದಿದ್ದಾರೆ. ಆದರೆ ಅದರ ಅಗತ್ಯವಿಲ್ಲ. ಇವತ್ತು ಯಾರ ಮೇಲೆ ಆರೋಪಗಳಿಲ್ಲ ಹೇಳಿ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಿಂದ ಹಿಡಿದು ಬಹುತೇಕರ ಮೇಲೆ ಆರೋಪಗಳಿವೆ. ಹಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಆ ನಾಯಕರು ಯಾರು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವರು ಈ ಮನೆಯ ಸದಸ್ಯರಲ್ಲದೆ ಇರುವುದರಿಂದ ನಾನವರ ಹೆಸರುಗಳನ್ನು ಹೇಳಲಾರೆ ಎಂದರು.
ಇವತ್ತು ಹಾದಿ ಬೀದಿಯಲ್ಲಿ ಹೋಗುವವರೂ ಆರ್ಟಿಐ ಅಡಿ ಮಾಹಿತಿ ಪಡೆದು ಮುಖ್ಯಮಂತ್ರಿಗಳು, ಸಚಿವರ ಮೇಲೆ ಕೇಸ್ ಹಾಕುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಾಗಂತ ಕೇಸ್ ಬಿದ್ದ ಕೂಡಲೇ ಅವರೆಲ್ಲ ತಪ್ಪಿತಸ್ಥರಲ್ಲ. ನನ್ನ ವಿರುದ್ಧವೂ ಇಂತಹ ಕೇಸ್ ದಾಖಲಾಗಿದೆ. ಆದರೆ ಎಲ್ಲಿಯವರೆಗೆ ನನಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಬೆಂಬಲ ಇರುತ್ತದೆಯೋ ಅಲ್ಲಿಯವರೆಗೆ ಇಂತಹ ನೂರು ಆರೋಪಗಳು ಬಂದರೂ ಗೆದ್ದು ಬರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ವಿದ್ಯುತ್ ಬಸ್ ಖರೀದಿ ಇಲ್ಲ, ಗುತ್ತಿಗೆ ಆಧಾರದಲ್ಲಿ ಪ್ರಾಯೋಗಿಕ ಸಂಚಾರವಷ್ಟೇ.. ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ತಮ್ಮ ಮೇಲೆ ಎಂಥೆಂತಹ ಆರೋಪಗಳು ಕೇಳಿ ಬಂದಿದ್ದವು ಎಂಬುದನ್ನು ನೆನಪಿಸಿಕೊಳ್ಳಬೇಕು. ಬಿಡಿಎ ಡಿನೋಟಿಫಿಕೇಷನ್ ಪ್ರಕರಣವನ್ನು ರೀ ಡೂ ಎಂದಿರಲ್ಲ? ಅದೇನು ಹಗರಣವಲ್ಲವೇ? ನೀವು ಬಹಳ ಬುದ್ಧಿವಂತಿಕೆಯಿಂದ ಅದನ್ನು ಮಾಡಿದ್ದೀರಿ. ನಾನು ಅಷ್ಟು ಜಾಣನಲ್ಲ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದರು.
ನಿಮ್ಮ ಕಾಲದಲ್ಲಿ ಎಸಿಬಿ ಮಾಡಿ ನಿಮಗೆ ಬೇಕಾದ ಮಂತ್ರಿಗಳ ಮೇಲಿನ ಆರೋಪಗಳೆಲ್ಲದರ ಬಗ್ಗೆ ತನಿಖೆ ನಡೆಸಿ ಬಿ ರಿಪೋರ್ಟ್ ಹಾಕಿಸಿದಿರಿ. ಹೀಗೆ ಏನೆಲ್ಲ ಹಗರಣಗಳ ಆರೋಪ ನಿಮ್ಮ ಮೇಲಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಆ ಆರೋಪ ಬಂದ ಕೂಡಲೇ ನೀವು ರಾಜೀನಾಮೆ ನೀಡಿದಿರಾ ಎಂದು ಪ್ರಶ್ನಿಸಿದರು.
ಆಪರೇಷನ್ ಕಮಲದ ಜನಕ ಎಂದು ನನ್ನ ಬಗ್ಗೆ ಆರೋಪಿಸುತ್ತೀರಲ್ಲ, ಸಿದ್ದರಾಮಯ್ಯನವರೇ ನೀವು ಜೆಡಿಎಸ್ ಪಕ್ಷದಿಂದ ಹೊರಹೋಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಎದುರಿಸಿದಿರಿ. ಆ ನಂತರದ ದಿನಗಳಲ್ಲಿ ನೀವು ಅದೆಷ್ಟು ಆಪರೇಷನ್ಗಳನ್ನು ಮಾಡಿ ಬೇರೆ ಪಕ್ಷದವರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡಿರಿ ಎಂದು ಪ್ರಶ್ನಿಸಿದರು.
ಆದರೆ ಇಂತಹ ಆರೋಪಗಳು ಏನೇ ಬರಲಿ, ಮೋದಿಯವರ, ಅಮಿತ್ ಶಾ ಅವರ, ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಇಂತಹ ನೂರು ಆರೋಪಗಳು ಬಂದರೂ ಎದುರಿಸಿ ಗೆದ್ದು ಬರುತ್ತೇನೆ. ಈಗಲೂ ಹೇಳುತ್ತೇನೆ. ನೀವೇನೇ ಆರೋಪ ಮಾಡಿ, ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ಶಾಶ್ವತ ವಿರೋಧ ಪಕ್ಷವನ್ನಾಗಿ ಮಾಡುತ್ತೇನೆ ಎಂದು ಗುಡುಗಿದರು.