ಬೆಂಗಳೂರು: ತಾಕತ್ತಿದ್ರೆ ಚುನಾವಣೆ ಎದುರಿಸಿ ಎಂದು ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಮುಂಬರುವ ಉಪಚುನಾವಣೆ ಎದುರಿಸಿ ಹಾಗೂ ಚುನಾವಣೆ ಗೆಲ್ಲಿ ಎಂದು, ಡಾಲರ್ಸ್ ಕಾಲೋನಿ ನಿವಾಸದ ಬಳಿ ಮಾಧ್ಯಮದ ಮೂಲಕ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯಗೆ ಚಾಲೆಂಜ್ ಹಾಕಿದ್ದಾರೆ.
ಅನರ್ಹ ಶಾಸಕರಿಗೂ ನಮಗೂ ಸಂಬಂಧ ಇಲ್ಲ, ಅವರು ಯಾವ ಪಕ್ಷ ಸೇರ್ತಾರೋ ಗೊತ್ತಿಲ್ಲ. ಪಕ್ಷೇತರರಾಗಿ ನಿಲ್ತಾರೋ ಗೊತ್ತಿಲ್ಲ. ಸುಪ್ರೀಂಕೋರ್ಟ್ಗೆ ಗೊಂದಲ ಹುಟ್ಟಿಸುವ ಕೆಲಸ ಮಾಡಬೇಡಿ ಎಂದರು.
ಆಡಿಯೋ ವಿಚಾರ:
ಸುಪ್ರೀಂಕೋರ್ಟ್ಗೆ ಬಿಎಸ್ವೈ ಆಡಿಯೋ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಆಡಿಯೋ ವಿಷಯದಲ್ಲಿ ಕಾಂಗ್ರೆಸ್ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಅವರು ಆರೋಪ ಮಾಡಿದ ಹಾಗೆ ನಾನು ಮಾತನಾಡಿಲ್ಲ. ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಸಂಚು ಮಾಡುತ್ತಿದೆ. ರಾಜೀನಾಮೆ ಕೊಟ್ಟಿರೋರ ಜೊತೆ ನೀವೇ ಮಾತನಾಡಿ, ನಿಮ್ಮ ಪಕ್ಷದಲ್ಲಿದ್ದವರನ್ನು ಕರೆದುಕೊಂಡು ಬನ್ನಿ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ನನ್ನ ಹೇಳಿಕೆಗಳನ್ನು ತಿರುಚಲಾಗಿದೆ, ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಆಡಿಯೋ ರೆಕಾರ್ಡ್ ಮಾಡಿದವರು ಯಾರು ಅನ್ನೋ ಪ್ರಶ್ನೆ ಇದೆ. ಅಲ್ಲದೆ, ಆ ಸಭೆಯಲ್ಲಿ ನಾವು ಮಾತನಾಡಿರುವುದೇ ಬೇರೆ ಎಂದ ಅವರು, ಮೈತ್ರಿ ಸರ್ಕಾರ ಬೀಳಿಸಿದ್ದು ನೀವೇ ಸಿದ್ದರಾಮಯ್ಯನವ್ರೇ, ಶಾಂತಿವನದಲ್ಲಿ ಕೂತು ಮಾತಾಡಿ ಮೈತ್ರಿ ಸರ್ಕಾರ ಬೀಳಿಸಿದ್ದೀರಿ. ನೀವೇ ಸರ್ಕಾರ ಬೀಳಿಸಿ ಬಿಜೆಪಿ ಮೇಲೆ ಆರೋಪ ಮಾಡೋದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.