ಬೆಂಗಳೂರು: ಸಚಿವ ಸಂಪುಟ ರಚನೆಗೆ ಮುನ್ನವೇ ಅಪಸ್ವರ ಎನ್ನುವಂತೆ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸಂಪುಟದಿಂದ ದೂರವುಳಿಯುವ ಘೋಷಣೆ ಮಾಡುತ್ತಿದ್ದಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲರ್ಟ್ ಆಗಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಜಟಿಲವಾಗದಂತೆ ನೋಡಿಕೊಳ್ಳುವ ಹೆಜ್ಜೆ ಇಡುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಹಿರಿಯ ನಾಯಕ ಜಗದೀಶ್ ಶೆಟ್ಟರ್ ನೂತನ ಸಂಪುಟಕ್ಕೆ ಸೇರುವುದಿಲ್ಲ ಎನ್ನುವ ಘೋಷಣೆ ಮಾಡಿದ್ದಾರೆ. ಮತ್ತೋರ್ವ ನಾಯಕ ಕೆ.ಎಸ್.ಈಶ್ವರಪ್ಪ ಕೂಡ ಇದೇ ಹಾದಿ ತುಳಿಯುವ ಸುಳಿವು ನೀಡಿದ್ದು ನಾಳೆ ಈ ಬಗ್ಗೆ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ವೈರಲ್ ಆಡಿಯೋದಲ್ಲಿ ಶೆಟ್ಟರ್ ಹಾಗೂ ಈಶ್ವರಪ್ಪರನ್ನು ಕೈಬಿಡುವ ಹೇಳಿಕೆ ನೀಡಲಾಗಿತ್ತು. ಆ ಇಬ್ಬರು ನಾಯಕರೇ ಈಗ ಸಂಪುಟ ರಚನೆಗೂ ಮೊದಲೇ ಸಂಪುಟದಿಂದ ಹೊರಗುಳಿಯುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಹಿರಿಯ ನಾಯಕರ ಈ ಹೇಳಿಕೆಯಿಂದ ಸಮಸ್ಯೆ ಸೃಷ್ಟಿಯಾಗಬಹುದು ಎನ್ನುವುದನ್ನು ಅರಿತಿರುವ ನೂತನ ಸಿಎಂ ಇದೀಗ ರಂಗಪ್ರವೇಶ ಮಾಡುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಸಂಪುಟದಿಂದ ಹೊರಗುಳಿಯುವ ಹೇಳಿಕೆ ನೀಡುತ್ತಿದ್ದಂತೆ ಶೆಟ್ಟರ್ ಜೊತೆಗೆ ಮಾತುಕತೆ ನಡೆಸಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಎಂ, ಶೆಟ್ಟರ್ ನಂಗೆ ತುಂಬಾ ಆತ್ಮೀಯರು ಅವರು ಸಂಪುಟದಿಂದ ಹೊರಗೆ ಉಳಿಯುವುದಾಗಿ ಹೇಳಿಕೆ ನೀಡಿದ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಿರಲು ಇಷ್ಟಪಡುವುದಿಲ್ಲ: ಹೀಗಂದಿದ್ದೇಕೆ ಶೆಟ್ಟರ್!?