ಬೆಂಗಳೂರು: 'ರಾಜ್ಯದಲ್ಲಿ 46,800 ಕೋಟಿ ರೂ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಇನ್ನೂ 1 ಲಕ್ಷ ಕೋಟಿ ರೂ. ಕಾಮಗಾರಿ ಕುರಿತ ಪ್ರಸ್ತಾವನೆಗಳು ಬಂದಿದ್ದು, ಫಾಸ್ಟ್ ಟ್ರಾಕ್ನಲ್ಲಿ ಮಂಜೂರಾತಿ ನೀಡುವ ಕುರಿತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೊತೆ ಮಹತ್ವದ ಚರ್ಚೆ ಮಾಡಿದ್ದೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದ ಖಾಸಗಿ ತಾರಾ ಹೋಟೆಲ್ನಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತು ಪರಿಶೀಲನಾ ಸಭೆ ಜರುಗಿತು.
ಈ ಸಭೆಯ ನಂತರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಿಎಂ, 'ಸ್ಯಾಟಲೈಟ್ ಟೌನ್ರಿಂಗ್ ರಸ್ತೆ ಬನ್ನೇರುಘಟ್ಟ ಅರಣ್ಯದಲ್ಲಿ ಹಾದು ಹೋಗುವ ಯೋಜನೆ ಇದೆ. ಬನ್ನೇರುಘಟ್ಟದ ಹೊರಭಾಗದಲ್ಲಿ ತೆಗೆದುಕೊಂಡು ಹೋಗಲು ಮನವಿ ಮಾಡಿದ್ದು, ಗಡ್ಕರಿ ಒಪ್ಪಿಗೆ ಕೊಟ್ಟಿದ್ದಾರೆ. ಹಳ್ಳಿಗಳಲ್ಲಿ ರೈಲ್ವೆ ಕ್ರಾಸಿಂಗ್ ಸಮಸ್ಯೆ ಬಗ್ಗೆ ಮನವಿ ಮಾಡಿದ ನಂತರ ರೈಲ್ವೆ ಗೇಟ್‌ನಲ್ಲಿ ಮೇಲ್ಸೇತುವೆ ಕೆಳ ಸೇತುವೆಗೆ ಒಂದು ಸಾವಿರ ಕೋಟಿ ರೂ.ಯಷ್ಟು ಮಂಜೂರಾತಿಗೆ ಒಪ್ಪಿಕೊಂಡಿದ್ದಾರೆ. ಇನ್ನು ಒಂದು ವಾರದಲ್ಲಿ ಪ್ರಸ್ತಾವನೆಯನ್ನು ಕಳಿಸಿ ಕೊಡಲಿದ್ದೇವೆ' ಎಂದು ತಿಳಿಸಿದರು.
'ಮಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಕಡೆ ಎಲ್ಲೆಲ್ಲಿ ನಗರ ಪ್ರದೇಶದಲ್ಲಿ ಸಂಚಾರದಟ್ಟಣೆ ಆಗುತ್ತಿದೆಯೋ ಅಲ್ಲಿ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಉಳಿದ ಭಾಗದಲ್ಲಿ ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದಾರೆ. ಹಾಲಿ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೇಲ್ಸೇತುವೆ ಎಲ್ಲೆಲ್ಲಿ ಮಾಡಲು ಸಾಧ್ಯವೋ ಅವುಗಳನ್ನ ಮಾಡಲು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಲು ತಿಳಿಸಿದ್ದಾರೆ' ಎಂದರು.
ವರ್ತುಲ ರಸ್ತೆಗಳಿಗೆ ಒಪ್ಪಿಗೆ: 'ಬೆಂಗಳೂರಿನ ಬಗ್ಗೆ ಸುದೀರ್ಘವಾದ ಚರ್ಚೆಯಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈಓವರ್ ಮಾಡಲು ತೀರ್ಮಾನಿಸಲಾಗಿದೆ. ಮೆಟ್ರೋ ನಿಲ್ದಾಣಗಳಿಗೆ ಬರುವ ಜನರಿಗೆ ಅವರ ಮನೆಗಳಿಗೆ ತಲುಪಲು ಬೇರೆ ಬೇರೆ ರೀತಿಯ ಸಂಚಾರ ವ್ಯವಸ್ಥೆಯನ್ನು ಬಳಸಿಕೊಳ್ಳುವ ಕುರಿತು ಚರ್ಚೆಯಾಗಿದೆ. ಡಬಲ್ ಡೆಕ್ಕರ್ ಬಸ್ಸು, ಕೇಬಲ್ ಕಾರ್ ಸಣ್ಣ ಕಾರುಗಳು ಈ ರೀತಿ ಬೇರೆ ಬೇರೆ ವ್ಯವಸ್ಥೆಗಳ ಕುರಿತು ಸಮಗ್ರವಾದ ಅಧ್ಯಯನ ನಡೆಸಲು ತಜ್ಞರನ್ನ ನೇಮಿಸಿ ಯೋಜನೆ ಮಾಡಿಕೊಡುತ್ತೇವೆ. ಅದರ ಹೂಡಿಕೆ ನೀವು ಮಾಡಬೇಕು' ಎಂದು ತಿಳಿಸಿದ್ದಾರೆ.
'ಬೆಂಗಳೂರಿನ ವರ್ತುಲ ರಸ್ತೆ, ರಾಯಚೂರು ವರ್ತುಲ ರಸ್ತೆ, ಕೊಪ್ಪಳ ವರ್ತುಲ ರಸ್ತೆ, ಗದಗ, ಶಿವಮೊಗ್ಗ ವರ್ತುಲ್ ರಸ್ತೆ ಬಗ್ಗೆ ಮಾತುಕತೆಯಾಗಿದ್ದು, ಈ ವರ್ಷದಲ್ಲೇ ತೆಗೆದುಕೊಳ್ಳಲು ಒಪ್ಪಿದ್ದಾರೆ. ಈ ಯೋಜನೆಗಳಲ್ಲಿ ಶೇ.50 ರಷ್ಟು ಹಣಕಾಸು ಒದಗಿಸುವುದು ನಮ್ಮ ಹೊಣೆಗಾರಿಕೆ ಇದೆ, ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ಎಲ್ಲಾ ಯೋಜನೆಗಳಲ್ಲಿ ಶೇಕಡ 50ರಷ್ಟು ಹಣ ಕೊಡುವ ಬದಲು ಮರಳು, ಜೆಲ್ಲಿ ರಾಜಧನದಲ್ಲಿ ಮತ್ತು ಜಿಎಸ್‌ಟಿ ಪರಿಹಾರದ ಹಣದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಶೇಕಡ 50ರ ಪಾಲುದಾರಿಕೆ ಮಾಡುವ ಅಗತ್ಯವಿರುವುದಿಲ್ಲ. ಈ ರೀತಿ ಹೊಂದಾಣಿಕೆ ಮಾಡುವ ಕುರಿತು ತೀರ್ಮಾನ ಆಗಿದೆ' ಎಂದರು.
ಶಿರಾಡಿ ಘಾಟ್ ರಸ್ತೆ ಟೆಂಡರ್: 'ಶಿರಾಡಿ ಘಾಟ್ 4 ಪಥದ ರಸ್ತೆ ಮಾಡಲು ಟೆಂಡರ್ ಮಾಡಲಾಗಿದೆ. ಮಾರ್ಚ್ನಲ್ಲಿ ಅದರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ. ಇಲ್ಲಿ ದೀರ್ಘಾವದಿ ಯೋಜನೆಯಾಗಿ 10,000 ಕೋಟಿ ಮೊತ್ತದ ಸುರಂಗ ಮಾರ್ಗ ನಿರ್ಮಾಣದ ಕುರಿತು ವಿನ್ಯಾಸ ಮಾಡಿ ಮಂಜೂರಾತಿ ಮಾಡಿಕೊಡುವ ಕುರಿತು ವಿವರ ನೀಡಿದ್ದಾರೆ. ಸದ್ಯಕ್ಕೆ ಈಗ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ನಗರದ ಯಶವಂತಪುರ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ನಿಷೇಧ ಹೇರಲಾಗಿದೆ, ಕೂಡಲೇ ಮೇಲ್ಸೇತುವೆ ದುರಸ್ತಿ ಕೆಲಸ ಆರಂಭಿಸುವ ಆದೇಶ ಮಾಡಿದ್ದಾರೆ. ಆದಷ್ಟು ಬೇಗ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ' ಎಂದರು.
'ಬಳ್ಳಾರಿ ಹೊಸಪೇಟೆ ಹೆದ್ದಾರಿಯನ್ನು ಬೆಮಲ್ ಇಂಡಿಯಾಗೆ ಗುತ್ತಿಗೆ ಕೊಡಲಾಗಿದೆ. ಆದರೆ ಅವರು ಇನ್ನೂ ಯೋಜನೆ ಆರಂಭಿಸಿಲ್ಲ. ಹಾಗಾಗಿ ಗುತ್ತಿಗೆ ರದ್ದುಪಡಿಸಿ ಬೇರೆ ಟೆಂಡರ್ಗೆ ನಿರ್ಧರಿಸಲಾಗಿದೆ. ಇದರ ಜೊತೆ ಹತ್ತು ಹಲವಾರು ಪ್ರಸ್ತಾವನೆಗಳ ಬಗ್ಗೆ ಚರ್ಚೆಯಾಗಿದೆ. ಭೂಸ್ವಾಧೀನ ಕಾರಣಕ್ಕೆ ನಿಂತಿರುವ ಕಾಮಗಾರಿಗಳ ಬಗ್ಗೆ ಕೂಡಲೇ ಸರಿಪಡಿಸಿಕೊಳ್ಳುವ ಭರವಸೆ ನೀಡಿದ್ದೇವೆ. ಕೂಡಲೇ ಭೂಸ್ವಾಧೀನಪಡಿಸಿಕೊಂಡು ಯೋಜನೆಗಳಿಗೆ ಚಾಲನೆ ಕೊಡುವ ಪ್ರಯತ್ನ ಮಾಡಲಾಗುತ್ತದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ಬಹುನಿರೀಕ್ಷಿತ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ ಮಾಡುತ್ತೇವೆ' ಎಂದು ತಿಳಿಸಿದರು.
ಇದನ್ನೂ ಓದಿ: ಮುಂದಿನ ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ: ಕೇಂದ್ರ ಸಚಿವ ನಿತಿನ್ ಗಡ್ಕರಿ