ಬೆಂಗಳೂರು: ಕಳೆದ ಬಾರಿ ಬಿಬಿಎಂಪಿಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿಯೂ ಹೆಚ್ಚಿನ ಸ್ಥಾನದೊಂದಿಗೆ ಅಧಿಕಾರಕ್ಕೆ ಬರಬೇಕು ಎನ್ನುವ ಸಂಕಲ್ಪದೊಂದಿಗೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ. ಅಧಿಕಾರಕ್ಕೆ ಬರಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಬಿಎಂಪಿ ಚುನಾವಣೆಗೆ ಪೂರ್ವ ಸಿದ್ದತೆ ಸಭೆ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ವಿಭಾಗದ ಶಾಸಕರು, ಸಚಿವರು ಹಾಗೂ ಸಂಸದರು ಭಾಗಿಯಾಗಿದ್ದರು. ಪಾಲಿಕೆ ಗದ್ದುಗೆ ಏರಲು ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದರು.
ಸಭೆ ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಎರಡು ದಿನಗಳ ಕಾಲ ಬಿಬಿಎಂಪಿ ವ್ಯಾಪ್ತಿಯ ಮೂರು ಜಿಲ್ಲೆಗಳ ಪ್ರಮುಖರ ಸಭೆ ಮಾಡಿದ್ದೇವೆ. ಶಾಸಕರು, ಸಚಿವರು, ಲೋಕಸಭಾ ಸದಸ್ಯರು, ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದು, ಪಕ್ಷದ ಸಂಘಟನೆ, ವಾರ್ಡ್ನ ಸಂಘಟನೆ, ಜನರ ವಿಚಾರಗಳು, ಸರ್ಕಾರ ಮತ್ತು ಸಂಘಟನೆ ಯಾವ ರೀತಿ ಸಮನ್ವಯತೆ ಸಾಧಿಸಬೇಕು ಎನ್ನುವುದು ಸೇರಿ ಎಲ್ಲ ವಿಚಾರಗಳನ್ನು ಚರ್ಚಿಸಿದ್ದೇವೆ. ಬೂತ್ಮಟ್ಟದ ಸಮಿತಿಗಳನ್ನು ಯಾವ ರೀತಿ ಸಬಲೀಕರಣಗೊಳಿಸಬೇಕು ಎನ್ನುವುದು ಎಲ್ಲರೂ ಸೇರಿ ಸುದೀರ್ಘವಾಗಿ ಚರ್ಚೆಯಾಗಿದೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬೆಂಗಳೂರಿನಲ್ಲಿ ಪಕ್ಷ ಸದೃಢವಾಗಿದ್ದು, ಅತಿ ಹೆಚ್ಚು ಶಾಸಕರನ್ನು ಹೊಂದಿದೆ. 3 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದೆ. ಈ ಎಲ್ಲಾ ಆಯಾಮದಲ್ಲಿ ಬಿಜೆಪಿ ಇನ್ನಷ್ಟು ಗಟ್ಟಿಯಾಗಿದೆ. ಚುನಾವಣೆಗೆ ಸಿದ್ಧಗೊಳಿಸಬೇಕು ಎಂದು ನಿರ್ಧರಿಸಿದ್ದೇವೆ. ಕಳೆದ ಬಾರಿ ಬಿಬಿಎಂಪಿಯಲ್ಲಿ ಅತಿ ಹೆಚ್ಚು ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈ ಬಾರಿಯೂ ಹೆಚ್ಚು ಸದಸ್ಯರು ಆಯ್ಕೆಯಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಬೆಂಗಳೂರು ಸಮಸ್ಯೆ ಬಗ್ಗೆ ಚರ್ಚೆ : ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸಿಎಂ ನೇತೃತ್ವದಲ್ಲಿ ಬಿಬಿಎಂಪಿ ವಿಚಾರ ಸುಧೀರ್ಘ ಚರ್ಚೆ ನಡೆದಿದೆ. ಬಿಬಿಎಂಪಿ ಚುನಾವಣೆ ಸಂಬಂಧ ಪಕ್ಷ ಮತ್ತು ಸಂಘಟನೆ ಹೇಗೆ ಮಾಡಬೇಕು ಅಂತ ಚರ್ಚೆ ಮಾಡಲಾಯಿತು.
ಬೆಂಗಳೂರಿಗೆ ಬಿಜೆಪಿ ಕೊಡುಗೆ ಅನೇಕ ಇದೆ. ಕಾವೇರಿ ನೀರು, ಮೆಟ್ರೋ, ಸಬ್ ಅರ್ಬನ್ ಎಲ್ಲವೂ ಬಿಜೆಪಿ ಅಧಿಕಾರದಲ್ಲಿದ್ದಾಗ ಬಂದಿದೆ. ಅಭಿವೃದ್ಧಿ ಕೆಲಸಗಳ ವೇಗವನ್ನು ಹೇಗೆ ಹೆಚ್ಚಿಸಬೇಕು ಅಂತ ಚರ್ಚೆಯಾಗಿದೆ. ಈಗಲೂ ಜನ ಹೇಗೆ ಸಮಸ್ಯೆ ಎದುರಿಸುತ್ತಿದ್ದಾರೆ ಅಂತ ಚರ್ಚೆ ನಡೆಸಲಾಯಿತು. ಸಿಎಂ ಅವರೇ ಕೂತು ಸಮಸ್ಯೆ ಆಲಿಸಿದರು ಎಂದರು.
ಸೋಮವಾರದಿಂದ ಶಾಸಕರ ಸಭೆ : ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯಬೇಕು. ಈಗಾಗಲೇ ಪಕ್ಷದಿಂದ ಕಾರ್ಯಕರ್ತರನ್ನ ಹುರಿದುಂಬಿಸೋ ಕೆಲಸ ಆಗುತ್ತಿದೆ. ಪಕ್ಷದ ಜವಾಬ್ದಾರಿ ನೀಡಿ ಕೆಲಸ ತೆಗೆಸಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಕುರಿತಾಗಿ, ಮೂಲಸೌಕರ್ಯ, ಕೊಳಚೆ ಪ್ರದೇಶ, ನೀರು, ವಿದ್ಯುತ್ ಸಮಸ್ಯೆ ಎದುರಿಸಲಾಗುತ್ತಿದೆ. ಈ ಸಂಬಂಧ ಬೆಂಗಳೂರಿನ ಶಾಸಕರು, ಸಂಸದರು, ಮುಖಂಡರು ಸೋಮವಾರದಿಂದ ಸಭೆ ನಡೆಸುತ್ತೇವೆ. ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲು ಸಿಎಂ ಸೂಚಿಸಿದ್ದಾರೆ. ಒಂದು ವಾರದಲ್ಲಿ ಆ ಸಮಸ್ಯೆ ಬಗೆಹರಿಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಮುಂದಿಟ್ಟು ಮತಯಾಚನೆ: ಚುನಾವಣೆ ಎಷ್ಟು ವಾರ್ಡ್ಗೆ ಆಗಬೇಕು ಅನ್ನೋದು ಕೋರ್ಟ್ ಸೂಚಿಸಲಿದೆ. ಅತಿ ಹೆಚ್ಚು ಸೀಟ್ ಗೆಲ್ಲುವುದು ನಮ್ಮ ಪಕ್ಷದ ಕೆಲಸ. ಹೀಗಾಗಿ, ಪಕ್ಷ ಸಂಘಟನೆ ಮಾಡಲಾಗುವುದು. ಸಿಎಂ ರಿಂದ ಹಿಡಿದು ಎಲ್ಲರೂ ಗೆಲ್ಲವುದಕ್ಕೆ ಪರಿಶ್ರಮ ಹಾಕುತ್ತಾರೆ. ಹಿಂದಿನ ಸರ್ಕಾರ ಅಥವಾ ಈಗಿನ ಸರ್ಕಾರ ಇರಬಹುದು. ಯಾವ್ಯಾವ ಪಕ್ಷ ಬೆಂಗಳೂರಿಗೆ ಏನು ನೀಡಿದೆ ಅಂತ ಜನರ ಮುಂದೆ ಇಡುತ್ತೇವೆ. ಅದರ ಮೂಲಕವೇ ಜನರಿಂದ ಮತ ಪಡೆದು ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಕಾಂಗ್ರೆಸ್ ಹೇಳಿಕೆಗೆ ಉತ್ತರ ಕೊಡುವ ಅಗತ್ಯ ಇಲ್ಲ: ಸಚಿವ ಎಸ್ ಟಿ ಸೋಮಶೇಖರ್