ಬೆಂಗಳೂರು: ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡ "ಏರೋ ಇಂಡಿಯಾ ಶೋ 2023" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಕಾರ್ಯಸಾಧನೆಗೆ ಪ್ರಧಾನಿ ಅವರ ಆಶಯದಂತೆ ಕರ್ನಾಟಕ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಹಾಗೂ ರಕ್ಷಣಾ ವಲಯದಲ್ಲಿ ಕೊಡುಗೆ ನೀಡಲಿದೆ. ಏರೋ ಇಂಡಿಯಾ ಶೋ 14 ನೇ ಆವೃತ್ತಿಯ ಗಾತ್ರ, ಪ್ರದರ್ಶನ ಮತ್ತು ಕಾರ್ಯವೈಖರಿಯ ದೃಷ್ಟಿಯಿಂದ ಅತ್ಯಂತ ವಿಶೇಷವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಅತಿದೊಡ್ಡ ಏರ್ ಶೋ ಇದಾಗಿದೆ. ರಕ್ಷಣಾ ವಲಯ ಹಾಗೂ ಏರ್ ಶೋ ಪ್ರದರ್ಶನದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ. ಕೋವಿಡ್ ಸಂದರ್ಭದಲ್ಲಿ ಪ್ಯಾರೀಸ್ ಏರ್ ಶೋ ನಡೆಯದಿದ್ದಾಗ, ನಮ್ಮ ಏರ್ ಶೋ ಯಶಸ್ವಿಯಾಗಿ ಜರುಗಿತು. ಈ ಬಾರಿ ವಸ್ತು ಪ್ರದರ್ಶನದ ವಿಸ್ತೀರ್ಣ, ಪ್ರದರ್ಶಕರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
ರಕ್ಷಣಾ ವಲಯದಲ್ಲಿ ರಾಜ್ಯ ಮುಂಚೂಣಿ: ಕರ್ನಾಟಕದಲ್ಲಿ 1940 ರಲ್ಲಿ ಹೆಚ್ಎಎಲ್, 1950 ರಲ್ಲಿ ಬಿಹೆಚ್ಇಎಲ್, ಬಿಇ ಎಲ್, ಡಿಆರ್ಡಿಒ ಸ್ಥಾಪನೆಗೊಂಡವು. 1960 ರಲ್ಲಿ ಇಸ್ರೋ ಕಾರ್ಯಾರಂಭ ಮಾಡಿದರೆ, 1970 ರಲ್ಲಿ ಮೊದಲ ಉಪಗ್ರಹ ಆರ್ಯಭಟವನ್ನು ಬೆಂಗಳೂರಿನಲ್ಲಿ ತಯಾರಿಸಲಾಯಿತು. ಅಲ್ಲಿಂದ ನಾವು ಹಿಂತಿರುಗಿ ನೋಡಿಲ್ಲ. ಈಗ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೆಂದರೆ ಅದು ಕರ್ನಾಟಕ. ರಕ್ಷಣಾ ವಲಯದ ಶೇ.65 ರಷ್ಟು ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ ಎಂದರು.
45 ಸಾವಿರಕ್ಕೂ ಹೆಚ್ಚು ಯುವಕರ ಬಳಕೆ: ರಾಜ್ಯದಲ್ಲಿ ಏರೋಸ್ಪೇಸ್ ಹಾಗೂ ರಕ್ಷಣಾ ನೀತಿಯು ಜಾರಿಯಲ್ಲಿದ್ದು, ರಕ್ಷಣಾ ಹಾಗೂ ಏರೋಸ್ಪೇಸ್ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು 45 ಸಾವಿರಕ್ಕೂ ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳಲಾಗುವುದು. ಕರ್ನಾಟಕ 14 ನೇ ಏರೋ ಶೋ ಆಯೋಜಿಸಲು ಅವಕಾಶ ಮಾಡಿಕೊಟ್ಟಿರುವ ಪ್ರಧಾನಿಗಳು ಹಾಗೂ ರಕ್ಷಣಾ ಸಚಿವರಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು. ರಕ್ಷಣಾ ವಲಯದ ಶಕ್ತಿ ಹಾಗೂ ಸಾಮರ್ಥ್ಯ ವೃದ್ಧಿಗೆ ಕರ್ನಾಟಕ ತನ್ನ ಕೊಡುಗೆಯನ್ನು ನಿರಂತರವಾಗಿ ನೀಡಲಿದೆ ಎಂದರು.
ಡ್ರೋಣ್ ಬಲೂನ್ ಹಾರಾಟ ನಿಷೇಧ: ಇಂದಿನಿಂದ ಏರೋ ಇಂಡಿಯಾ- 2023 ವೈಮಾನಿಕ ಪ್ರದರ್ಶನವಿರುವ ಕಾರಣ ಫೆಬ್ರವರಿ 17 ರವರೆಗೆ ನಗರದ ಕಾನೂನು ಸುವ್ಯವಸ್ಥೆ ವ್ಯಾಪ್ತಿಯಲ್ಲಿ ಡ್ರೋಣ್, ಮಾನವ ರಹಿತ ಸಣ್ಣ ಪ್ರಮಾಣದ ಏರ್ ಕ್ರಾಫ್ಟ್ಸ್, ಪ್ಯಾರಾ ಗ್ಲೈಡರ್ಸ್, ಮೈಕ್ರೋ ಲೈಟ್ಸ್, ಕ್ವಾಡ್ ಕಾಫ್ಟರ್ಸ್, ಬಲೂನ್ಸ್ ಹಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.
ಏರೋ ಇಂಡಿಯಾ ಪ್ರದರ್ಶನದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಭದ್ರತೆ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯುವ ದೃಷ್ಟಿಯಿಂದ ಮತ್ತು ವೈಮಾನಿಕ ಪ್ರದರ್ಶನಕ್ಕೆ ಅಡ್ಡಿಯಾಗದಂತೆ ತಡೆಯುವ ಉದ್ದೇಶದಿಂದ ಫೆಬ್ರವರಿ 13 ರಿಂದ ಫೆಬ್ರವರಿ 17ರವೆಗೂ ಈ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಆಯುಕ್ತರ ಆದೇಶದಲ್ಲಿ ಸೂಚಿಸಲಾಗಿದೆ.