ಬೆಂಗಳೂರು: ನಮ್ಮ ತಂದೆ, ಮಾಜಿ ಮುಖ್ಯಮಂತ್ರಿಗಳಾದ ಎಸ್ ಆರ್ ಬೊಮ್ಮಾಯಿ, ರಾಮಕೃಷ್ಣ ಹೆಗಡೆ, ಜೆಹೆಚ್ ಪಟೇಲ್ ಹಾಗೂ ಎಂಪಿ ಪ್ರಕಾಶ್ ಅವರಂತಹ ರಾಜಕಾರಣಿಗಳ ಜೊತೆ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರಿಗಿದ್ದ ಒಡನಾಟವನ್ನು ನೋಡಿಕೊಂಡು ನಾನು ಬೆಳೆದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕುಮಾರಪಾರ್ಕ್ ನಲ್ಲಿರುವ ಗಾಂಧಿ ಭವನದಲ್ಲಿ ಇಂದು ಅಭಿಮಾನಿ ಪ್ರಕಾಶನ ಹೊರತಂದಿರುವ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಅರವತ್ತು ವರ್ಷಗಳ ಅನುಭವ ಕಥನ 'ನಾನು ಹಿಂದೂ ರಾಮಯ್ಯ' ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾನು ಒಂದು ರೀತಿಯಲ್ಲಿ ಏಕಲವ್ಯನಂತೆ. ಆತ ಬಿಲ್ಲು ವಿದ್ಯೆಯನ್ನು ದ್ರೋಣಾಚಾರ್ಯರು ಕೌರವ ಪಾಂಡವರಿಗೆ ಕಲಿಸುತ್ತಿದ್ದುದನ್ನು ನೋಡಿಯೇ ಕಲಿತ. ಅಂತೆಯೇ ನಾನು ಯುವಕನಾಗಿದ್ದಾಗ ಪಿ.ರಾಮಯ್ಯ ಅವರು ಮತ್ತು ನಮ್ಮ ತಂದೆ ಎಸ್ಆರ್ ಬೊಮ್ಮಯಿ ನಡುವೆ ನಡೆಸುತ್ತಿದ್ದ ಮಾತುಕತೆ, ಹಿರಿಯ ರಾಜಕಾರಣಿಗಳ ಒಡನಾಟ ನೋಡುತ್ತಾ ಬೆಳೆದವನು. ಹಾಗಾಗಿ ರಾಮಯ್ಯ ಅವರು ಪರೋಕ್ಷವಾಗಿ ನನಗೆ ಹೆಚ್ಚು ಕಲಿಸಿದ್ದಾರೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಎಷ್ಟೋ ವಿಚಾರಗಳನ್ನು ಬರಹಗಳ ಮೂಲಕ ಅಭಿವ್ಯಕ್ತಿಪಡಿಸುವಾಗ ಇತಿಮಿತಿ ಪರಿಗಣಿಸುವುದು ಬಹಳ ಮುಖ್ಯ. ಬರೆಯುವಾಗ ಮಿತಿಗಳ ಅರಿವು ಅತ್ಯಗತ್ಯ. ಪೆನ್ನು ಇದ್ದಾಗಿನ ಚಿಂತನೆ ಬೇರೆ, ಮಾತನಾಡುವಾಗಿನ ಚಿಂತನೆ ಬೇರೆ ಇರಲಿದೆ. ಅದರಲ್ಲಿ ಸತ್ಯವನ್ನು ಪ್ರಿಯವಾಗಿ ಹೇಳುವುದು ರಾಮಯ್ಯ ಶೈಲಿ. ಪುಸ್ತಕದಲ್ಲಿ ಆರು ದಶಕದ ಅವರ ಅನುಭವ ಹೇಳಿದ್ದಾರೆ. ಎರಡು ತಲೆಮಾರಿನ ರಾಜಕಾರಣ, ಮೂರು ತಲೆಮಾರಿನ ಪತ್ರಕರ್ತರನ್ನು ಅವರು ನೋಡಿದ್ದಾರೆ. ಬೇರೆಯವರಾಗಿದ್ದರೆ. ಇದೇ ಅನುಭವವನ್ನು ರೋಚಕವಾಗಿ ಬರೆದು ಪ್ರಶಸ್ತಿ ಪಡೆಯುತ್ತಿದ್ದರು. ಆದರೆ ರಾಮಯ್ಯ ತಮ್ಮ ಗುಣಧರ್ಮ ಬಿಟ್ಟು ಕೊಡಲ್ಲ ಎಂದು ಅರ್ಥಪೂರ್ಣ ಕೃತಿ ರಚನೆ ಮೂಲಕ ತೋರಿಸಿದ್ದಾರೆ ಎಂದರು.
ಹಲವಾರು ಸನ್ನಿವೇಶಗಳು ನಮ್ಮಲ್ಲಿ ಬದಲಾವಣೆ ತರಲಿದೆ. ಆದರೆ, ಕೆಲವರು ತಮ್ಮ ವ್ಯಕ್ತಿತ್ವ ಚಿಂತನೆಯಲ್ಲಿ ಬದಲಾಗಲ್ಲ. ಅವರ ಸಾಲಿನಲ್ಲಿ ರಾಮಯ್ಯ ಸೇರಲಿದ್ದಾರೆ. ಅವರು ನೋಡಿದ ಎಲ್ಲ ಮುಖ್ಯಮಂತ್ರಿಗಳ ಜೊತೆಗೆ ಅತ್ಯಂತ ಆತ್ಮೀಯರಾಗಿದ್ದರು. ರಾಮಯ್ಯ ಶುದ್ಧ ಪತ್ರಕರ್ತ, ಅಪರೂಪದ ವ್ಯಕ್ತಿ. ಆತ್ಮಸಾಕ್ಷಿಯ ಅನುಗುಣವಾಗಿ ನಡೆಯುವುದು ಬಹಳ ಕಷ್ಟ. ಆದರೆ, ರಾಮಯ್ಯ ಅವರಿಗೆ ಬಾಲ್ಯದ ಮುಗ್ದತೆ ಹಾಗೆಯೇ ಇದೆ. ಮನಃಸಾಕ್ಷಿಗೆ ಅನುಗುಣವಾಗಿ ಇದ್ದಾರೆ ಇದು ತಪಸ್ಸು ಎನ್ನಬಹುದು, ಅವರನ್ನು ಪತ್ರಿಕೋದ್ಯಮದ ತಪಸ್ವಿ ಅವರು ಎನ್ನಬಹುದು ಎಂದರು.
ಐಡಿಯಾ, ಐಡಿಯಲಿಸಂ ರಾಮಯ್ಯ ಅವರಿಗೆ ಇರಲಿಲ್ಲ. ಅವರಿಗೆ ಇದ್ದದ್ದು ಕೇವಲ ಸತ್ಯ ಮಾತ್ರ. ನಮ್ಮ ತಪ್ಪನ್ನು ಪತ್ತೆ ಹಚ್ಚಿ ಹೇಳುವವರು ಮತ್ತು ಪೂರ್ವ ಗ್ರಹಪೀಡಿತ ಬರಹ ಬರೆಯುವವರು ಎರಡು ರೀತಿ ಇದ್ದಾರೆ. ನೀರಾವರಿ, ವಿದ್ಯುತ್ ಕ್ಷೇತ್ರದಲ್ಲಿ ಪಿ.ರಾಮಯ್ಯ ಬರೆದ ಬರಹ ಇವತ್ತೂ ನಾವು ರೆಫರ್ ಮಾಡುತ್ತೇವೆ. ಸಮಾಜಮುಖಿಯಾಗಿಯೂ ಅವರು ಕೆಲಸ ಮಾಡಿದ್ದಾರೆ. ಸತ್ಯ, ಪ್ರಾಮಾಣಿಕ, ದಕ್ಷತೆಯ ಜೀವನ ಸಾಗಿಸಿದ್ದಾರೆ. ಸಮಕಾಲೀನ ಕರ್ನಾಟಕದ ಇತಿಹಾಸ, ರಾಜಕಾರಣ, ಸಮಸ್ಯೆ ಪರಿಹಾರ, ಜನರ ಬದುಕು ಒಟ್ಟಾರೆ ಚಿತ್ರಣ ಈ ಕೃತಿಯಲ್ಲಿ ಸಿಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಯಾವ ಯಾತ್ರೆ ಮಾಡಿದ್ರೂ 2023ರಲ್ಲಿ ಜೆಡಿಎಸ್ಗೆ ಅಧಿಕಾರ: ಹೆಚ್ಡಿಕೆ