ಬೆಂಗಳೂರು: ಯಾವುದೇ ಒಬ್ಬರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂಬ ಪರಿಕಲ್ಪನೆ ತಪ್ಪು, ಸ್ವಾತಂತ್ರ್ಯಕ್ಕಾಗಿ ಅನೇಕ ಜನ ಪ್ರಾಣ ಬಲಿದಾನ ಮಾಡಿದ್ದಾರೆ ಎಂದು ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಫೋಟೋ ಕೈಬಿಟ್ಟಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಆಯೋಜಿಸಲಾಗಿದ್ದ ದೇಶ ವಿಭಜನೆ ಕರಾಳ ನೆನಪು ಹಾಗೂ ವಸ್ತು ಪ್ರದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಂತರ ದೇಶ ವಿಭಜನೆಯ ಕರಾಳ ದಿನದ ಛಾಯಾಚಿತ್ರ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಫೋಟೋ ಕೈ ಬಿಟ್ಟ ವಿಚಾರ ಕಾಂಗ್ರೆಸ್ ಪ್ರಸ್ತಾಪಿಸಿದೆ, ನಾನು ಕಾಂಗ್ರೆಸ್ನವರಿಗೆ ಒಂದು ಪ್ರಶ್ನೆ ಕೇಳುತ್ತೇನೆ, ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನೇ ಎಲ್ಲೂ ಇಲ್ಲದಂತೆ ಮಾಡಿದ್ದರು, ಆವಾಗ ಇವರಿಗೆ ಅಂಬೇಡ್ಕರ್ ನೆನಪಾಗಿಲ್ವಾ? ದೇಶಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಿದ ವಲ್ಲಭಭಾಯ್ ಪಟೇಲ್ರನ್ನ ಮರೆಸಿದ್ದರು, ಯಾವುದೇ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಎಂಬ ಪರಿಕಲ್ಪನೆ ತಪ್ಪು. ಅನೇಕ ಜನ ಪ್ರಾಣ ಬಲಿದಾನ ಮಾಡಿದ್ದಾರೆ. 75ನೇ ಸ್ವಾತಂತ್ರ್ಯೋವ ಅನಾಮಧೇಯ ಹೋರಾಟಗಾರರಿಗೆ ಮೀಸಲಿಟ್ಟಿದ್ದು, ಎಲ್ಲೇ ಹೋದರು ನೆಹರು ಹೆಸರು ಇಟ್ಟಿದ್ದೇವೆ, ಜಾಹೀರಾತಿನಲ್ಲೂ ನೆಹರೂ ಇದ್ದಾರೆ ಆದರೂ ಯಾಕಿಷ್ಟು ಗಾಬರಿ ಕಾಂಗ್ರೆಸ್ಸಿಗರಿಗೆ..!? ಎಂದು ಪ್ರಶ್ನಿಸಿದರು.
ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಚಂದ್ರಶೇಖರ್ ಅಜಾದ್ ಇವರಿಗೆ ನೆನಪಾಗಿಲ್ಲ? ನಿಜವಾದಂತಹ ಹೋರಾಟಗಾರರ ಸವಿನೆನಪು ಕರ್ನಾಟಕದಲ್ಲಿ ಮಾಡಿಕೊಟ್ಟಿದ್ದೇವೆ ಅವರಿಗೆ ನಮನ ಸಲ್ಲಿಸಿದ್ದು ಕರ್ನಾಟಕದಲ್ಲಿ ಮಾತ್ರ. ಹಿಂದೆಂದೂ ಕೂಡ ನೆನಪು ಮಾಡಿಕೊಂಡ ದಾಖಲೆಗಳು ಇಲ್ಲ ಅದನ್ನ ಅಭಿನಂದಿಸಬೇಕು ಎಲ್ಲರನ್ನು ನೆನಪು ಮಾಡಿಕೊಂಡಿದ್ದೀವಿ ಅಂತಾ ಅಭಿನಂದನೆ ಸಲ್ಲಿಸಬೇಕು, ದಾದಾಬಾಯಿ ನವರೋಜಿ, ಹರ್ಡೇಕರ್ ಅವರನ್ನ ನೆನಪು ಮಾಡಿಕೊಂಡಿದ್ದೇವೆ. ಅವರೆಲ್ಲ ಕಾಂಗ್ರೆಸ್ನವರೆ, ನಾವೇನು ಭೇದ ಭಾವ ಮಾಡಿಲ್ಲ ಎಂದರು.
ಸಿದ್ದು ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಸಿಎಂ: ಅಧಿಕಾರಕ್ಕೋಸ್ಕರ ಆರ್ಎಸ್ಎಸ್ನವರ ಹಿಡಿತದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಪ್ರಾರಂಭದಲ್ಲಿ ಏಕವಚನದಲ್ಲೇ ಸಿದ್ದರಾಮಯ್ಯ ಮೇಲೆ ಹರಿಹಾಯ್ದರು. ಸಿದ್ದರಾಮಯ್ಯ ಆ ಹುಡುಗ ರಾಹುಲ್ ಗಾಂಧಿ ಮುಂದೆ ಕೈಕಟ್ಟಿಕೊಂಡು ನಿಂತ ಮೇಲೆ ಅವನದೆಲ್ಲ ಸ್ವಾಭಿಮಾನ ಮುಗಿದು ಹೋಯ್ತು. ನಾವೆಲ್ಲ ಸಿದ್ದರಾಮಣ್ಣನ ಬಗ್ಗೆ ಬಹಳಷ್ಟು ಎತ್ತರದಲ್ಲಿಟ್ಟಿದ್ದೆವು. ಆದರೆ, ಯಾವತ್ತು ಅವನಿಗಿಂತ ಸಣ್ಣವಯಸ್ಸಿನ ರಾಹುಲ್ ಗಾಂಧಿ ಮುಂದೆ ದೆಹಲಿಗೆ ಹೋಗಿ ಕೈಕಟ್ಟಿಕೊಂಡು ನಿಂತರೋ ದಿನಗಟ್ಟಲೇ ಕಾದರೋ ಅವರ ಗೌರವ ಅವರ ಸ್ವಾಭಿಮಾನ ಅಲ್ಲಿಗೆ ಮುಗಿಯಿತು ಎಂದರು.
ಕರಾಳ ದಿನವನ್ನು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ: ಪೂರ್ವ ಹಾಗೂ ಪಶ್ಚಿಮ ದೇಶ ವಿಭಜನೆ ಆದಾಗ 10 ಲಕ್ಷ ಜನರು ವಲಸೆ ಆದರು, ದೊಡ್ಡ ಹಿಂಸಾಚಾರ ಆಯಿತು, ಸಾವು ನೋವು ಆಯಿತು, ಬಹಳಷ್ಟು ಕಡೆ ಹಸಿವಿನಿಂದ ಸತ್ತು ಹೋದರು, ಇದು ಯಾಕೆ ಆಯಿತು ಅಂತ ಇತಿಹಾಸದಲ್ಲಿ ದಾಖಲೆ ಇದೆ, ಇದಕ್ಕೆಲ್ಲ ಯಾರೆಲ್ಲಾ ಕಾರಣ ಅಂತಾನೂ ದಾಖಲೆ ಇದೆ, ಇದೊಂದು ದೊಡ್ಡ ದುರಂತ, ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ದೇಶವನ್ನು ಒಡೆಯುವ ಕೆಲಸ ಆಗಿದೆ ಎಂದರು.
ರಕ್ತ ಭೂಮಿಗೆ ಚೆಲ್ಲಿದರೂ ಸ್ವತಂತ್ರ್ಯ ಸಮಯದಲ್ಲಿ ಪ್ರಾಣ ಇತ್ತು. ಆದರೆ, ವಿಭಜನೆ ಸಮಯದಲ್ಲಿ ಪ್ರಾಣ ಹೋಯ್ತು, ದೇಶ ಒಂದಾಗಿದ್ದರೆ ಇಂತಹ ಘಟನೆ ತಪ್ಪಿಸಬಹುದಿತ್ತು. 50 ವರ್ಷದಲ್ಲಿ ಹಿಂದಿನ ಆಚರಣೆ ಅಷ್ಟೊಂದು ಪರಿಣಾಮ ಬೀರಿಲ್ಲ. ಮೋದಿ ಬಂದ್ಮೇಲೆ ಹರ್ ಘರ್ ತಿರಂಗಾ ಮೂಲಕ ಇಡೀ ದೇಶದಲ್ಲಿ ದೇಶ ಭಕ್ತಿ ಮೂಡಿಸಿದರು ಎಂದು ಹೊಗಳಿದರು.
ಇದನ್ನೂ ಓದಿ: ಶೀಘ್ರವೇ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಸಭೆ: ಸಿಎಂ ಬೊಮ್ಮಾಯಿ