ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಹೋದ ನಂತರ ತಿಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಹಾಗಾಗಿ ಹೈಕಮಾಂಡ್ ಸಂದೇಶವನ್ನು ಎದುರು ನೋಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್.ಟಿ.ನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ರಾಜ್ಯ ಭೇಟಿ ವೇಳೆ ಸಂಪುಟ ವಿಸ್ತರಣೆ ವಿಷಯ ಪ್ರಸ್ತಾಪವಾಯಿತು. ಆದರೆ ವಿಸ್ತೃತವಾದ ಚರ್ಚೆ ನಡೆಯಲಿಲ್ಲ ಎಂದರು.
ದೆಹಲಿಗೆ ತೆರಳಿದ ನಂತರ ಚರ್ಚೆ ಮಾಡಿ ತಿಳಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದೆಲ್ಲಾ ಮಾಧ್ಯಮಗಳಿಂದ ಬಂದಿರುವ ವಿಷಯ ಅಷ್ಟೇ ಎಂದು ತಿಳಿಸಿದರು.
ಬಜೆಟ್ ಅನುಷ್ಠಾನಕ್ಕೆ ಸರಣಿ ಸಭೆ: ಬಜೆಟ್ ಅನುಷ್ಠಾನ ಕೂಡಲೇ ಆಗಬೇಕು ಎನ್ನುವ ಕಾರಣಕ್ಕೆ ಆದೇಶಗಳನ್ನು ಮಾಡಬೇಕು ಎನ್ನುವುದು ಮೊದಲ ಹಂತವಾಗಿದೆ. ಆಯಾ ಇಲಾಖೆಯ ಪ್ರಸ್ತಾವನೆ ತೆಗೆದುಕೊಂಡು ಹಣಕಾಸು ಇಲಾಖೆಯ ಅನುಮೋದನೆ ಪಡೆದು ಆದೇಶ ಮಾಡುವುದು ಮೊದಲನೇ ಹಂತ. ಅದು ಬಹುತೇಕ ಮುಗಿದಿದೆ. ಕೆಲವು ಕಾನೂನು ಮತ್ತು ತಾಂತ್ರಿಕ ಕಾರಣಕ್ಕೆ ಶೇಕಡಾ 20ರಷ್ಟು ಅನುಮೋದನೆ ಆಗಿಲ್ಲ. ಅದನ್ನು ಕೂಡಲೇ ಮಾಡಲಾಗುತ್ತದೆ.
ಆದರೆ ಈಗ ಅನುಮೋದನೆ ಸಿಕ್ಕಿರುವ ಪ್ರಸ್ತಾವನೆಗಳ ಅನುಷ್ಠಾನ ಮಾಡಲು ಕಾಲಮಿತಿ ನಿಗದಿ ಮಾಡಬೇಕಾಗಿದೆ. ಹಾಗಾಗಿ ಪ್ರಮುಖ ಇಲಾಖೆಗಳಿಂದ ಪ್ರಾರಂಭ ಮಾಡಿ ಎಲ್ಲಾ ಇಲಾಖೆಗಳಲ್ಲಿ ಅನುಷ್ಠಾನಕ್ಕೆ ಕಾಲಮಿತಿ ನಿಗದಿ ಮಾಡುವ ಕೆಲಸವನ್ನು ಮಾಡುತ್ತೇನೆ. ಈ ಸಭೆಗಳು ಒಂದು ವಾರದ ಹಿಂದೆಯೇ ತೀರ್ಮಾನವಾಗಿತ್ತು. ಅದರಂತೆ ಪ್ರಮುಖ ಇಲಾಖೆಗಳ ಬಜೆಟ್ ಅನ್ನು ಅನುಷ್ಠಾನಕ್ಕೆ ತರಲು ಇಂದಿನ ಸಭೆಯಲ್ಲಿ 1 ವರ್ಷದ ಕ್ಯಾಲೆಂಡರ್ಗಳನ್ನು ನಿಗದಿಪಡಿಸಲಾಗುತ್ತದೆ.
ಡಿಸಿ, ಸಿಇಒ ಜೊತೆಗೆ ಸಭೆ: ಮುಂದಿನವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಲು ನಿರ್ಧರಿಸಲಾಗಿದೆ. ಡಿಸಿಗಳ ಜೊತೆ ಒಂದು ದಿನ, ಸಿಇಒಗಳ ಮತ್ತೊಂದು ದಿನ ಪ್ರತ್ಯೇಕವಾಗಿ ಇಡೀ ದಿನ ಚರ್ಚೆ ನಡೆಸಲಾಗುತ್ತದೆ. ವಿವಿಧ ಇಲಾಖೆಗಳ ಕಾರ್ಯಕ್ರಮ, ಅಭಿವೃದ್ಧಿ ಕೆಲಸಗಳು ಮತ್ತು ಫಲಾನುಭವಿಗಳ ಆಯ್ಕೆಯಾಗಲು ಅಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಜಿಲ್ಲಾಮಟ್ಟದ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಎಂಟಿಬಿ ನಾಗರಾಜ್ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಕಿಡಿ