ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರು 40 ಪರ್ಸೆಂಟೇಜ್ ಲಂಚ ಕೊಡಬೇಕು. ಈಗ ಬಿಬಿಎಂಪಿ ಟೆಂಡರ್ ಪಡೆಯಬೇಕಾದರೆ 50 ಪರ್ಸೆಂಟ್ ಕಮಿಷನ್ ಕೊಡಬೇಕು ಅಂತಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ. ಇದು ಭ್ರಷ್ಟ ಸರ್ಕಾರ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಹಿಡಿದು ಸಚಿವರೆಲ್ಲರೂ ಭ್ರಷ್ಟರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರರಾ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಾ?. ಈ ಹಿಂದೆ ಭ್ರಷ್ಟಾಚಾರ ಆಗಿತ್ತು ಅಂತಾರೆ. ಹಾಗಾದರೆ ಇಷ್ಟು ದಿನ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಇದ್ರಾ?. ಸುಮ್ನೆ ರಾಜಕೀಯ ಆರೋಪ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
ಕೆಂಪಣ್ಣ ಅವರು ಬಂದು ನನ್ನ ಭೇಟಿಯಾಗಿದ್ದರು. ಅವರು ಕೊಟ್ಟ ಸಲಹೆಯಂತೆ ಕೆಲಸ ಮಾಡಿಸ್ತಿದ್ದೇವೆ. ಕೆಂಪಣ್ಣ ಒಂದು ವರ್ಷದಿಂದ ಆರೋಪ ಮಾಡ್ತಾ ಇದ್ದಾರೆ. ಇಷ್ಟುದಿನ ನಿಖರವಾಗಿ ಯಾವೊಬ್ಬ ಸಚಿವರ ಮೇಲೆ ಆರೋಪ ಮಾಡಿರಲಿಲ್ಲ. ಈಗ ಮುನಿರತ್ನ ಮೇಲೆ ಆರೋಪ ಮಾಡಿದ್ದಾರೆ ಎಂದರು.
ಮುಂದಿನ ಹೋರಾಟ ಮಾಡ್ತಾರೆ: ಕೆಂಪಣ್ಣ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಮುನಿರತ್ನ ಅವರೇ ಹೇಳಿದ್ದಾರೆ. ಮುನಿರತ್ನ ಮುಂದಿನ ಹೋರಾಟ ಮಾಡ್ತಾರೆ. ವಿಚಾರಣೆ ಮಾಡಿಸುವುದಾಗಿ ಹೇಳಿದ್ದಾರೆ. ಅವರು ಬಿಟ್ಟರೂ, ನಾನು ಬಿಡಲ್ಲ ಎಂದು ಮುನಿರತ್ನ ಹೇಳಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಓದಿ: ಕೆಂಪಣ್ಣರನ್ನು ಮೆಂಟಲ್ ಆಸ್ಪತ್ರೆಗೆ ಕಳುಹಿಸಿ.. ಕೃಷಿ ಸಚಿವ ಬಿಸಿ ಪಾಟೀಲ್ ಗರಂ