ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. 52 ನಿಗಮ ಮಂಡಳಿಗಳ ಅಧ್ಯಕ್ಷರ ನಾಮ ನಿರ್ದೇಶನ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ನಿನ್ನೆಯಷ್ಟೇ ಸುಮಾರು ಮೂರು ಗಂಟೆಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗೌಪ್ಯ ಸ್ಥಳದಲ್ಲಿ ಸಭೆ ನಡೆಸಿ, ಒಂದೂವರೆ ವರ್ಷ ಪೂರೈಸಿರುವ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಆದೇಶವನ್ನು ವಾಪಸ್ ಪಡೆದು, ಹೊಸ ಅಧ್ಯಕ್ಷರ ನೇಮಕ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ 52 ನಿಗಮ ಅಧ್ಯಕ್ಷರನ್ನು ನಾಮ ನಿರ್ದೇಶವನ್ನು ರದ್ದು ಪಡಿಸಿದ್ದಾರೆ. ಅಚ್ಚರಿ ಎಂದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತರಾಗಿರುವ ನಿವೃತ್ತ ಸಿಎಸ್ ರತ್ನಪ್ರಭಾ, ನಟಿ ಶೃತಿ, ಶಿವಮೊಗ್ಗದ ಎಸ್.ದತ್ತಾತ್ರಿ ಮತ್ತು ಬಿ.ವೈ.ವಿಜಯೇಂದ್ರ ಆಪ್ತ ತಮ್ಮೇಶ್ ಗೌಡ ಹಾಗೂ ಸೇರಿದಂತೆ ಬಿವೈಎಸ್ ಆಪ್ತರನ್ನು ಕೈಬಿಡಲಾಗಿದೆ. ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಪಕ್ಷದ ಕೆಲ ಶಾಸಕರು ಹಾಗೂ ಮಾಜಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮುಂದುವರೆಸಲಾಗಿದೆ.
ಖಾಲಿಯಾಗಿರುವ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಗಳಿಗೆ ಇನ್ನೆರಡು ದಿನದಲ್ಲಿ ನೂತನ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. ಅಲ್ಲದೇ, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಕೂಡ ಆದಷ್ಟು ಬೇಗ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ಗೃಹ ಸಚಿವ ದಿಢಿರ್ ಭೇಟಿ: ಅತ್ಯಾಧುನಿಕ ಮೊಬೈಲ್ ಜಾಮರ್ ಅಳವಡಿಕೆಗೆ ನಿರ್ಧಾರ ಎಂದ ಜ್ಞಾನೇಂದ್ರ