ಬೆಂಗಳೂರು: ಕಾರ್ಪೊರೇಟರ್ ಗಳಿಲ್ಲದ ಕಾರಣ ಶಾಸಕರೇ ಪ್ರವಾಸ ಮಾಡಿ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿರ್ಧಾರ ಕೈಗೊಂಡಿದ್ದು, 150 ಕ್ಕೂ ಹೆಚ್ಚಿನ ವಾರ್ಡ್ ಗಳಲ್ಲಿ ಗೆಲ್ಲುವ ಮೂಲಕ ಬಿಬಿಎಂಪಿ ಚುಕ್ಕಾಣಿ ಹಿಡಿಯಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳಲಾಗಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಪದಾಧಿಕಾರಿಗಳ ಸಭೆ ನಡೆಯಿತು. ಇನ್ನೂ ಎರಡು ಜಿಲ್ಲೆಯ ಸಭೆ ನಡೆಯಲಿದೆ. ಇಂದು ಮೂರು ಗಂಟೆ ಸುದೀರ್ಘ ಚರ್ಚೆ ನಡೆಸಲಾಯಿತು. ಸಿಎಂ ಬೆಂಗಳೂರು ಉಸ್ತುವಾರಿ ಆಗಿರುವ ಕಾರಣಕ್ಕೆ ಇಲ್ಲಿ ಪಕ್ಷವನ್ನು ಸುಭದ್ರ ಮಾಡಿ ಗೆಲ್ಲುವ ತಂತ್ರ ರೂಪಿಸಲು ಎಲ್ಲರ ಅಭಿಪ್ರಾಯ ಕೇಳಿ ಸಲಹೆ ಸೂಚನೆ ಕೊಟ್ಟಿದ್ದಾರೆ.
ಈಗಾಗಲೇ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ, ಆರು ಸಾವಿರ ಕೋಟಿಯನ್ನು ಅಮೃತ ನಗರೋತ್ಥಾನ ಯೋಜನೆಗೆ ಬಿಡುಗಡೆ ಮಾಡಿದ್ದಾರೆ. ಎಲ್ಲಾ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನ ಸಮರ್ಥವಾಗಿ ಬಳಸಿಕೊಂಡು ಬಿಬಿಎಂಪಿಯಲ್ಲಿ 150 ಸ್ಥಾನ ಗೆಲ್ಲಲು ತಂತ್ರ ಮಾಡುತ್ತಿದ್ದೇವೆ ಎಂದರು.
ಕಾರ್ಪರೇಟರ್ಗಳು ಅಧಿಕಾರದಲ್ಲಿ ಇಲ್ಲದ ಕಾರಣ ಶಾಸಕರು ಜವಾಬ್ದಾರಿ ಪಡೆದು ಕೆಲಸ ಮಾಡಬೇಕು ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಜನರ ಕಷ್ಟವನ್ನು ಶಾಸಕರೇ ಕೇಳಬೇಕಿದೆ ಹಾಗಾಗಿ ನಾಳೆಯಿಂದ ಕ್ಷೇತ್ರಗಳಲ್ಲಿ ನಾವು ಪ್ರವಾಸ ಮಾಡಲಿದ್ದೇವೆ, ಕೊರೊನಾ ನೋಡಿಕೊಂಡು ಮಂಜೂರಾತಿ ಆಗಿರುವ ಕಾಮಗಾರಿ ಉದ್ಘಾಟನೆ, ಚಾಲನೆ ಕೊಡುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಸಂಘಟನೆಗೆ ಸೂಚನೆ ಕೊಡಲಾಗಿದೆ ಮುಂದಿನ ಲಕ್ಷ್ಯ ಬಿಬಿಎಂಪಿ ಮೇಯರ್ ಸ್ಥಾನ ಗಳಿಸಬೇಕು ಎನ್ನುವುದಾಗಿದೆ. ನಾವೆಲ್ಲಾ ಸಕ್ರಿಯವಾಗಿ ಕೆಲಸ ಮಾಡಲು ಸಿದ್ಧರಾಗುತ್ತೇವೆ. ಈಗ 198 ರ ಬದಲು 243 ವಾರ್ಡ್ ಗಳು ವಿಂಗಡಣೆಯಾಗಲಿವೆ. ಅಷ್ಟಕ್ಕೂ ಚುನಾವಣೆ ನಡೆಯಲಿದೆ, ನಾವು ಅಷ್ಟಕ್ಕೂ ಸಿದ್ಧತೆ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಕೋರ್ಟ್ ತೀರ್ಪು ಬೇರೆ ಬಂದ್ರೆ ನಾವು ಸುಪ್ರೀಂ ತೀರ್ಪಿಗೆ ಬದ್ಧರಾಗಿರಲಿದ್ದೇವೆ ಎಂದರು.
ನಂತರ ಮಾತನಾಡಿದ ಸಚಿವ ಅಶ್ವತ್ಥನಾರಾಯಣ್, ಸಿಎಂ ಬೆಂಗಳೂರು ಅಭಿವೃದ್ಧಿ ಇಲಾಖೆ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಿಂದೆ ಸಿಎಂ ಆಗಿದ್ದ ಮಾಜಿ ಸಿಎಂ ಬಿಎಸ್ವೈ ಕೂಡ ಬೆಂಗಳೂರು ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನಿರ್ವಹಣೆ ಮಾಡಿದ್ದರು. ಈಗ ಬೊಮ್ಮಾಯಿ ಅವರು ಅದನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಯಾರು ಯಾವ ಜಿಲ್ಲೆಯಿಂದ ಆಯ್ಕೆಯಾಗಿರುತ್ತೇವೋ ಅಲ್ಲಿ ಉಸ್ತುವಾರಿ ಆಗಬಾರದು ಎನ್ನುವ ನೀತಿಯನ್ನು ಹೈಕಮಾಂಡ್ ತೆಗೆದುಕೊಂಡಿದೆ ಅದೇ ದಾರಿಯಲ್ಲಿ ಕರ್ನಾಟಕದಲ್ಲೂ ಈ ಪದ್ದತಿ ಜಾರಿಗೊಳಿಸಲಾಗಿದೆ. ಹಾಗಾಗಿ ಬೆಂಗಳೂರಿನಿಂದ ಆಯ್ಕೆಯಾದವರಿಗೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಬಿಎಂಪಿಗೆ ಚುನಾವಣೆ ಆಗಬೇಕು ಎನ್ನುವುದು ಸರ್ಕಾರದ ನಿಲುವಾಗಿದೆ, ಅದಕ್ಕೆ ನಾವು ಬದ್ದವಾಗಿದ್ದೇವೆ. ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಬೇಕು ಎನ್ನುವುದು ಜನರ ಬೇಡಿಕೆ ಅದನ್ನು ಪೂರೈಸಿ ಅದರ ಪ್ರಕಾರ ಚುನಾವಣೆ ನಡೆಸಲಿದ್ದೇವೆ, ಅದಕ್ಕಾಗಿ 198 ರಿದ 243 ವಾರ್ಡ್ ಮಾಡುವುದು ಸರ್ಕಾರದ ಸ್ಪಷ್ಟ ನಿಲುವು, ಅದಕ್ಕೆ ಬದ್ಧರಿದ್ದೇವೆ. ಆದರೆ ಪಾಲಿಕೆ ವ್ಯಾಪ್ತಿಯ ವಿಸ್ತರಣೆ ಯಾವುದು ಇಲ್ಲ, ಕೇವಲ ವಾರ್ಡ್ ಸಂಖ್ಯೆ ಮಾತ್ರ ಹೆಚ್ಚಳವಾಗಲಿದೆ ಎಂದರು.
ಬೆಂಗಳೂರು ಹಲವಾರು ಸಮಸ್ಯೆ ಎದುರಿಸುತ್ತಿದೆ, ರಸ್ತೆಗಳ ಅಭಿವೃದ್ಧಿ, ಕೆರೆ, ಪಾರ್ಕ್, ಅಭಿವೃದ್ಧಿ, ಉಪನಗರ ರೈಲು, ಮೆಟ್ರೋ ಎಲ್ಲಾ ಅಭಿವೃದ್ಧಿ ಆಗಬೇಕಿದೆ, ಬಹು ನಿರೀಕ್ಷೆಯ ಅಭಿವೃದ್ಧಿ ಆಗಬೇಕಿದೆ, ಎಲ್ಲವನ್ನು ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.
ಸಂಘಟನೆ ಸಕ್ರಿಯವಾಗಿದೆ. ಶಕ್ತಿಶಾಲಿಯಾಗಿದೆ, ಅವಿರತ ಕೆಲಸ ಮಾಡಲಿದೆ, ಶತ ಶತಮಾನದಿಂದ ಕೆಲಸ ಆಗಿರಲಿಲ್ಲ ಅಂತಹ ಕೆಲಸ ಈಗ ಮಾಡಲಾಗಿದೆ, ಜನಪರ ಕೆಲಸ ಮಾಡಲಾಗಿದೆ, ಕನಸು ಮನಸಿನಲ್ಲೂ ಆಗದ ಕೆಲಸ ಕಾರ್ಯ ಮಾಡಲಾಗಿದೆ ಎಂದು ಬಿಜೆಪಿ ಸಾಧನೆ ಸಮರ್ಥಿಸಿಕೊಂಡರು.
ಶಾಸಕರು ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ: ಕಾಂಗ್ರೆಸ್ ಮುಳುಗುವ ಪಕ್ಷ, ರಾಷ್ಟ್ರೀಯ ಅಧ್ಯಕ್ಷರು ಯಾರು ಎನ್ನುವುದೇ ಗೊತ್ತಿಲ್ಲ, ಯುಪಿ, ಪಂಜಾಬ್, ಗೋವಾದಲ್ಲಿ ಯಾರು ಅಧ್ಯಕ್ಷ ಅಂತ ಗೊತ್ತಿಲ್ಲ. ಕುಟುಂಬ ಆಧಾರಿತ ಪಕ್ಷಕ್ಕೆ ಭವಿಷ್ಯವಿಲ್ಲ. ಅಂತಹದ್ದರಲ್ಲಿ ಬಿಜೆಪಿ ಶಾಸಕರ ಯಾವ ಭರವಸೆಯಿಂದ ಅಲ್ಲಿಗೆ ಹೋಗಲಿದ್ದಾರೆ, ಅವರೇ ಇರುತ್ತಾರೋ ಇಲ್ಲವೋ ನೋಡಬೇಕು, ಆ ಪಕ್ಷಕ್ಕೆ ಸಿದ್ಧಾಂತವಿಲ್ಲ, ಅವರಲ್ಲಿ ಒಗ್ಗಟ್ಟಿಲ್ಲ, ಅವರವರೇ ಕಾಲೆಳೆದುಕೊಳ್ಳುತ್ತಿದ್ದಾರೆ. ಆ ಪಕ್ಷಕ್ಕೆ ಭವಿಷ್ಯವಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ಹೊಸಬರಿಗೆ ಅವಕಾಶ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ್, ಹೊಸಬರಿಗೆ ಅವಕಾಶ ನೀಡುವುದು ಸಹಜ ನಿಯಮ. ಯಾರು ಇದನ್ನು ಮಾಡಿದರೂ ಆ ಪಕ್ಷಕ್ಕೆ ಭವಿಷ್ಯವಿರಲಿದೆ. ಹಳೆ ಬೇರೆ, ಹೊಸ ಚಿಗುರು ಇರಬೇಕು, ಯುಪಿಯಲ್ಲಿ ನಾವು ಅಧಿಕಾರಕ್ಕೆ ಮರಳಲಿದ್ದೇವೆ ಎಂದು ಭವಿಷ್ಯ ನುಡಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ