ಬೆಂಗಳೂರು: ಬೆಂಗಳೂರು ಯೋಜನಾ ಬದ್ಧವಾಗಿ ಬೆಳೆಯುತ್ತಿಲ್ಲ, ಮುಂದಿನ ಐವತ್ತು ವರ್ಷಗಳ ಯೋಜನೆಯನ್ನು ಬೆಂಗಳೂರಿಗೆ ರೂಪಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಉದ್ಯಾನವನ ಹಾಗೂ ಸ್ಕೇಟಿಂಗ್ ಟ್ರ್ಯಾಕ್ ಉದ್ಘಾಟನೆ, 150 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭೂಮಿಪೂಜೆ, ಅಂಬೇಡ್ಕರ್ ಕ್ರೀಡಾಂಗಣದ ನವೀಕರಣ ಕಾಮಗಾರಿ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಕಟ್ಟಡದ ಭೂಮಿಪೂಜೆ, ನರ್ಸರಿ ಬ್ಲಾಕ್ ಮತ್ತು ಪ್ರಾಥಮಿಕ ಶಾಲೆ ಕಟ್ಟಡದ ಭೂಮಿಪೂಜೆ, ವಿವಿಧೋದ್ದೇಶ ಕಟ್ಟಡದ ಭೂಮಿಪೂಜೆ, ಆರ್.ಕೆ.ಉರ್ದು ಸ್ಕೂಲ್‌ನ ಭೂಮಿ ಪೂಜೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಭೂಮಿಪೂಜೆ ಹಾಗು ಒಳಾಂಗಣ ಕ್ರೀಡಾಸೌಧ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪುತ್ಥಳಿಯನ್ನು ಸಿಎಂ ಉದ್ಘಾಟಿಸಿದರು.
ನಾಗರೀಕ ಸೇವೆಗಳನ್ನು ಅಪ್ ಗ್ರೇಡ್ ಮಾಡಬೇಕಿದೆ:
ನಂತರ ಮಾತನಾಡಿದ ಸಿಎಂ, ಬೆಂಗಳೂರಲ್ಲಿ ಯಾರಿಗೆ ಮನೆ ಇದೆಯೋ ಅವರಲ್ಲಿ ಹಲವರಿಗೆ ದಾಖಲೆ ಇಲ್ಲ, R ಸಮಸ್ಯೆ ಬಗೆಹರಿಸುತ್ತೇವೆ. ಪ್ರತೀ ವಾರ್ಡ್ಗೆ ತುರ್ತುಚಿಕಿತ್ಸೆ ವ್ಯವಸ್ಥೆ ಸಲುವಾಗಿ ಆಸ್ಪತ್ರೆ ತೆರೆಯಬೇಕಿದೆ. ಬೆಂಗಳೂರಿನಲ್ಲಿ ನಾಗರೀಕರ ಸೇವೆಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಬೇಕು. ಇದಕ್ಕೆ ಈಗಿರುವ ನಾಗರೀಕ ಸೇವೆಗಳನ್ನು ಅಪ್ ಗ್ರೇಡ್ ಮಾಡಬೇಕಿದೆ ಎಂದರು.
ವಯಸ್ಸು 70 ಪ್ಲಸ್, ಕೆಲಸ 20 ಪ್ಲಸ್:
ವಿ. ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ, ಅವ್ರನ್ನg ಕೇಳಿದೆ ವಯಸ್ಸು ಎಷ್ಟು ಅಂತಾ ಅವರಿಗೆ 70 ಪ್ಲಸ್ ಅಂದರು. ಆದರೆ ಕೆಲಸ 20 ಪ್ಲಸ್. ನನಗೆ ಸೋಮಣ್ಣನ ನೋಡಿದ್ರೆ ಖುಷಿಯೂ ಇದೆ, ಹೊಟ್ಟೆಕಿಚ್ಚೂ ಇದೆ. ಸೋಮಣ್ಣ ಪಾದರಸದ ಹಾಗೆ. ನಾವು ಬ್ಯುಸಿಯಲ್ಲಿರುವಾಗ್ಲೇ ಬಂದು ನೂರಿನ್ನೂರು ಕೋಟಿ ರೂ.ಗೆ ಮಂಜೂರು ತಗೊಂಡು ಹೋಗಿರ್ತಾರೆ. ಈ ಬೆಂಗಳೂರು ಸಚಿವರು ಈಗ ಇದೇ ಥರ ಕಲಿತುಕೊಂಡಿದ್ದಾರೆ, ಇವ್ರೆಲ್ಲಾ ಕೆಲಸ ಮಾಡೋದ್ರಿಂದ ಬೆಂಗಳೂರು ಸಚಿವನಾಗಿ ನನ್ನ ಕೆಲಸ ಕಡಿಮೆ ಆಗಿದೆ ಎಂದರು.
ಬೆಂಗಳೂರು ಸಚಿವರ ಕಾರ್ಯಕ್ಕೆ ಸಿಎಂ ಮೆಚ್ಚುಗೆ:
ನಮ್ಮ ಬೆಂಗಳೂರಿನ ಸಚಿವರು ಶಕ್ತಿ ಮೀರಿ ಕೋವಿಡ್ ವೇಳೆ ಕೆಲಸ ಮಾಡಿದ್ದಾರೆ. ಪೈಪೋಟಿಯಿಂದ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ನಮ್ಮ ಸಚಿವರ ಕಾರ್ಯದಿಂದ ಬೆಂಗಳೂರು ಅಂತಾರಾಷ್ಟ್ರೀಯವಾಗಿ ಮನ್ನಣೆ ಗಳಿಸುತ್ತಿದೆ. ಆದರೂ ಬೆಂಗಳೂರು ಯೋಜನಾಬದ್ಧವಾಗಿ ಬೆಳೆಯುತ್ತಿಲ್ಲ, ಮುಂದಿನ ಐವತ್ತು ವರ್ಷಗಳ ಯೋಜನೆ ಬೆಂಗಳೂರಿಗೆ ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಬಸವರಾಜ್ ಬೊಮ್ಮಾಯಿ ಹಾಸ್ಯ ಭಾಷಣ:
ಬೆಂಗಳೂರು ಸಚಿವರ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಿಎಂ, ಎಲ್ಲರನ್ನೂ ಸ್ವಾಗತ ಮಾಡುವಾಗ ಮುನಿರತ್ನ ಇದಿಯೇನಪ್ಪಾ ಅಂತಾ ಹುಡುಕಿದರು. ಈ ಸಂದರ್ಭದಲ್ಲಿ ಯಾವುದೋ ಆಲೋಚನೆಯಲ್ಲಿ ಕುಳಿತಿದ್ದ ಮುನಿರತ್ನರನ್ನು ಪಕ್ಕದಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಎಚ್ಚರಿಸಿದರು. ಆಗ ಗಲಿಬಿಲಿಗೊಂಡು ಸಿಎಂ ಕಡೆ ತಿರುಗಿದರು. ಮುನಿರತ್ನರನ್ನು ನೋಡಿ ಏನಪ್ಪ ಇಲ್ಲೇ ಇದ್ದೀಯಾ ಎಂದು ಭಾಷಣ ಮುಂದುವರಿಸಿದರು, ಈ ಬೆಂಗಳೂರಿಗರು ಯಾವಾಗ ಸೇರಿಕೊಳ್ಳುತ್ತಾರೋ ಯಾವಾಗ ಬಿಟ್ಟು ಹೋಗ್ತಾರೋ, ಗೊತ್ತಾಗಲ್ಲ ಎನ್ನುತ್ತಿದ್ದಂತೆ ಸಭಿಕರು ನಗೆಗಡಲಿನಲ್ಲಿ ತೇಲಿದರು.
ಸೋಮಣ್ಣರವೇ ನಿಜವಾದ ಚಾಣಕ್ಯ:
ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ, ಸೋಮಣ್ಣನವರ ಒಳ್ಳೆಯ ಕೆಲಸದಿಂದ ಅವರ ಬಗ್ಗೆ ಏನು ರಾಜ್ಯದ ಜನತೆಗೆ ಗೊತ್ತಿದೆ. ಅವರ ಸಮುದಾಯದ ಮತಗಳು ಇಲ್ಲಿ ಇಲ್ಲ. ಆದರೂ ಎಲ್ಲ ಸಮುದಾಯಗಳ ನಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಎರಡು ಕಣ್ಣುಗಳು ಇದ್ದಂತೆ. ಈ ಎರಡನ್ನೂ ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಪ್ರಮುಖ. ಉತ್ತಮ ಶಿಕ್ಷಣ ಆರೋಗ್ಯ ಒದಗಿಸಿರುವ ಸೋಮಣ್ಣರವೇ ನಿಜವಾದ ಚಾಣಕ್ಯ.
ಭುಜಕ್ಕೆ ಭುಜ - ಹೆಗಲಿಗೆ ಹೆಗಲು ಕೊಡುತ್ತೇವೆ:
ಮುಖ್ಯಮಂತ್ರಿಗಳ ಒಂದು ತಿಂಗಳ ಪಯಣವನ್ನು ರಾಜ್ಯ ನೋಡಿದೆ. ಮುಖ್ಯಮಂತ್ರಿಗಳು ಸಾಮಾನ್ಯರಲ್ಲೇ ಸಾಮಾನ್ಯರಾಗಿ ಸರ್ಕಾರದ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ . ನಾವು ಸಂಪುಟ ಸಚಿವರಾಗಿ ಮುಖ್ಯಮಂತ್ರಿಗಳಿಗೆ ಭುಜಕ್ಕೆ ಭುಜ - ಹೆಗಲಿಗೆ ಹೆಗಲನ್ನು ಕೊಟ್ಟು ರಾಜ್ಯದ ಸಮಗ್ರ ಅಭಿವೃದ್ಧಿಗೆ ದುಡಿಯುತ್ತೇವೆ ಎಂದರು.
ಅನುದಾನದ ಬೇಡಿಕೆ:
ಸಚಿವ ವಿ.ಸೋಮಣ್ಣ ಮಾತನಾಡಿ, ನಾನು ಲಿಂಗಾಯತ ಸಿಎಂ ಸಾಹೇಬರೇ? ಇಲ್ಲಿ ಲಿಂಗಾಯತ ಮಾತಗಳು ಶೇ. 2ರಷ್ಟು ಕೂಡ ಇಲ್ಲ. ನಾನು ಮಾಡಿದ ಕೆಲಸದ ಮೇಲೆ ಆಯ್ಕೆ ಆದವನು. ಹಾಗಾಗಿ ನನಗೆ ಅನುದಾನ ಸಮರ್ಪಕವಾಗಿ ಕೊಡಿ, ಆ ಮೂಲಕ ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ. ಮತದಾರರ ಮನ ಗೆಲ್ಲುತ್ತೇನೆ ಎಂದು ವಿವಿಧ ಕೆಲಸಗಳಿಗೆ ಅನುದಾನದ ಬೇಡಿಕೆ ಇಟ್ಟರು.
ನಿರಂಜನಾನಂದಪುರಿ ಸ್ವಾಮೀಜಿ ಮಾತು:
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಕಾಗಿನೆಲೆ ಕನಕಗುರು ಮಠದ ನಿರಂಜನಾನಂದಪುರಿ ಶ್ರೀಗಳು, ಎಸ್ಟಿ ಸಮುದಾಯದವರ ಮೇಲೆ, ನಮ್ಮ ಹೋರಾಟದ ಮೇಲೆ ಸಿಎಂಗೆ ಅತಿ ಹೆಚ್ಚು ಕಾಳಜಿ ಇದೆ. ನಮ್ಮ ಸಮುದಾಯದ ನಾಯಕರಿಗಿಂತ ಸಿಎಂಗೆ ಹೆಚ್ಚು ಕಾಳಜಿ ಇದೆ. ಪ್ರಲ್ಹಾದ್ ಜೋಶಿಯವರ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿಎಂ ನನಗೆ ಅಮಿತ್ ಶಾ ಅವರ ಪರಿಚಯ ಮಾಡಿಸಿದರು. ನಮ್ಮಹೋರಾಟದ ಕುರಿತು ಅಮಿತ್ ಶಾ ಅವರ ಗಮನಕ್ಕೂ ಸಿಎಂ ತಂದರು. ದೆಹಲಿಯಲ್ಲಿ ಭೇಟಿಗೆ ಅವಕಾಶ ಕೊಡುವಂತೆ ಅಮಿತ್ ಶಾ ಅವರಿಗೆ ಸಿಎಂ ಕೇಳಿಕೊಂಡರು. ಸಿಎಂ ಬೊಮ್ಮಾಯಿ ಅವರ ಪ್ರಯತ್ನದಿಂದ ಕೇಂದ್ರ ಸರ್ಕಾರ ಎಸ್ಟಿ ಮೀಸಲಾತಿ ಕೊಡುವ ಭರವಸೆ ನಮಗೆ ಇದೆ ಎಂದರು.
ಬಸವರಾಜ್ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ:
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ,ಇವರು ಕಾಮನ್ ಮ್ಯಾನ್ ಸಿಎಂ ಹೇಗೆ ಅಂತಾ ಸೆ. 2 ರಂದು ಗೊತ್ತಾಯಿತು. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರ ಮಗಳ ಮದುವೆಗೆ ಹೋಗಿದ್ದೆ,ಅಲ್ಲಿಗೆ ಮುಖ್ಯಮಂತ್ರಿಗಳು ಕೂಡ ಬರ್ತೀನಿ ಅಂದಿದ್ರು, ನಾನು ನೂತನ ವಧುವರರಿಗೆ ಆಶೀರ್ವದಿಸಿ, ಸಿಎಂ ಗೋಸ್ಕರ ಕಾಯುತ್ತಾ ಕುಳಿತಿದ್ದೆ, ಆಮೇಲೆ ಅವರು ಬಾರದೆ ಇದ್ದಾಗ ನಾನು ಅವರಿಗೆ ಕರೆ ಮಾಡಿ, ಎಲ್ಲಿದ್ದೀರಾ ಎಂದು ಕೇಳಿದೆ, ಅವಾಗ ಅವರು ಬರ್ತಿದ್ದೇನೆ ಸ್ವಾಮೀಜಿ ನಾನು ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದರು. ಅವಾಗ ಗೊತ್ತಾಯಿತು ಇವರು ಕಾಮನ್ ಮ್ಯಾನ್ ಸಿಎಂ ಎಂದರು.