ಬೆಂಗಳೂರು: ರಾಜಧಾನಿಯಲ್ಲಿ ಮಳೆ ಅನಾಹುತ ಸಂಬಂಧ ಸಿಎಂ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಳೆ ಅನಾಹುತ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸಭೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಕಾರಣ ಸಿಎಂ ಕೋಪಗೊಂಡರು. 'ಇಟ್ ಈಸ್ ನಾಟ್ ಡನ್' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾರಿಗೆ ಕ್ಲಾಸ್ ತೆಗೆದುಕೊಂಡರು.
ತುರ್ತು ಕ್ರಮಕ್ಕೆ ಸೂಚನೆ:
ಸಭೆಯ ಬಳಿಕ ಮಾತನಾಡಿದ ಸಿಎಂ, 'ಈ ವರ್ಷ ಮಳೆಗಾಲ ವಿಸ್ತರಣೆಯಾಗಿದೆ. ಹಿರಿಯ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು, ತುರ್ತು ಕ್ರಮ ವಹಿಸಲು ಸೂಚಿಸಿದ್ದೇನೆ. ಇದಕ್ಕೆ ಬೇಕಾದ ಹಣವನ್ನು ಎಸ್ಡಿಆರ್ಎಫ್ನಿಂದ ಹೊಂದಿಸಿ ಕೊಡಲಾಗುತ್ತದೆ. ರಕ್ಷಣಾ ತಂಡದಲ್ಲಿ 30ಕ್ಕೂ ಅಧಿಕ ಜನರನ್ನು ನೇಮಿಸಬೇಕು. ತಡೆಗೋಡೆ ಬಿದ್ದಿರುವ ಕಡೆ ತೊಂದರೆ ಉಂಟಾಗಿದ್ದು, ಸುಮಾರು 842 ಕಿ.ಮೀ. ತಡೆಗೋಡೆ ಇದ್ದು, ಈ ಪೈಕಿ 389 ಕಿ.ಮೀ ತಡೆ ಗೋಡೆ ಕಾಮಗಾರಿ ಮಾಡಬೇಕು. ನೀರು ನುಗ್ಗುವ ಸ್ಥಳ ಗುರುತಿಸಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದೇನೆ'.
'ಇನ್ನು ಈ ಸಂಬಂಧ ವರದಿ ಕೊಡುವಂತೆಯೂ ಸೂಚಿಸಿದ್ದೇನೆ. ಆರ್ಥಿಕ ಇಲಾಖೆಯಿಂದ ಅಗತ್ಯ ಹಣ ಬಿಡುಗಡೆ ಮಾಡುತ್ತೇವೆ. ಮಳೆಗಾಲದಲ್ಲಿ ಅಷ್ಟೇ ಅಲ್ಲ, ಬೇಸಿಗೆಯಲ್ಲಿ ರಾಜಕಾಲುವೆಯಲ್ಲಿ ತುಂಬಿರುವ ಹೂಳು ತೆಗೆಯಬೇಕು. ವಿಶೇಷವಾಗಿ ಈ ಕೆಲಸ ಆಗಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರತಿಬಾರಿ ಮಳೆ ಬಂದಾಗ ಈ ಸಮಸ್ಯೆ ಆಗುತ್ತಿದೆ. ತುರ್ತು ಮತ್ತು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ವರದಿ ಕೊಡುವಂತೆ ಸೂಚಿಸಿದ್ದೇನೆ' ಎಂದರು.
ನಗರಕ್ಕೆ 4 ಎಸ್ಡಿಆರ್ಎಫ್ ತಂಡ:
ಮುಂದಿನ ವರ್ಷದೊಳಗೆ ಬೆಂಗಳೂರಿನಲ್ಲಿ ನಾಲ್ಕು ಎಸ್ಡಿಆರ್ಎಫ್ ಟೀಮ್ ರಚನೆ ಆಗಬೇಕು. ಇವರಿಗೆ ಬೇಕಾದ ಅಗತ್ಯ ಸಲಕರಣೆ ಖರೀದಿಗೆ ಹಣ ಬಿಡುಗಡೆ ಮಾಡುತ್ತೇವೆ. ತಿಂಗಳಿಗೊಮ್ಮೆ ವರದಿ ಕೊಡಲು ಸೂಚಿಸಿದ್ದೇನೆ. ಬಿಬಿಎಂಪಿ ಮುಖ್ಯ ಆಯುಕ್ತರು ನನಗೆ ಉತ್ತರದಾಯಿತ್ವ. ಚೀಫ್ ಇಂಜಿನಿಯರ್ ಬಿಬಿಎಂಪಿ ಆಯುಕ್ತರಿಗೆ ಉತ್ತರದಾಯಿತ್ವ. ಪ್ರತಿ ತಿಂಗಳು ನನಗೆ ಬಿಬಿಎಂಪಿ ಮುಖ್ಯ ಆಯುಕ್ತರು ವರದಿ ಕೊಡಬೇಕೆಂದು ಸೂಚಿಸಿರುವುದಾಗಿ ಸಿಎಂ ಹೇಳಿದರು.
ಈ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.