ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿರುವ ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು - ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಪಡೆದರು.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಹಾಗೂ ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು ಅವರು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಸಿಎಂಗೆ ಕಸಾಪ ಸದಸ್ಯತ್ವ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಸಾಹಿತ್ಯ ಪರಿಷತ್ತಿನ ಗುರುತಿನ ಚೀಟಿಯನ್ನು ಡಾ. ಮಹೇಶ ಜೋಶಿ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಅನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸಲು ಒಂದು ಕೋಟಿ ಸದಸ್ಯತ್ವದ ಗುರಿ ಇರಿಸಿಕೊಂಡಿರುವ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಸಾಹಿತ್ಯ ಪರಿಷತ್ಗೆ ಮುಖ್ಯಮಂತ್ರಿಗಳನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಯುವ ಸಮೂಹ ಹೆಚ್ಚು ಹೆಚ್ಚು ಸದಸ್ಯತ್ವ ಪಡೆದುಕೊಳ್ಳಲು ಪ್ರೇರೇಪಣೆಯಾಗುವಂತೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಕಸಾಪ ಸದಸ್ಯತ್ವ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಬೆಂಗಳೂರು ನಗರ ಆರೋಗ್ಯ ಸೇವಾ ವಿಭಾಗ ರಚಿಸಿ: ಸಿಎಂ ಬೊಮ್ಮಾಯಿ ಸೂಚನೆ