ಬೆಂಗಳೂರು: ಆರೋಗ್ಯ ಇಲಾಖೆ ಆಯೋಜಿಸಿದ್ದ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ನೀಡುವ 'ಕೋವಿಡ್ ಲಸಿಕಾಕರಣ ಅಮೃತ್ ಮಹೋತ್ಸವ' ಕಾರ್ಯಕ್ರಮಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದ ಸಹಾಯದೊಂದಿಗೆ ರಾಜ್ಯದಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ. ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಗೆ ಸಾಕಷ್ಟು ನೆರವು ನೀಡಿದೆ ಎಂದು ಹೇಳಿದರು.
ಕೇಂದ್ರ ಹಣ ಕೊಡದಿದ್ದರೆ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬೀಳುತಿತ್ತು. ಕೊರೊನಾ ಕಡಿಮೆ ಆಗಿ ಕಣ್ಮರೆಯಾಗುತ್ತಿದೆ. ಕೊರೊನಾ ಬಂದ ಬಳಿಕ ವಿಜ್ಞಾನಿಗಳು, ವೈದ್ಯರು, ದಾದಿಯರು, ಅಂಗನವಾಡಿ ಕಾರ್ಯಕರ್ತೆಯರು ಎಲ್ಲರೂ ಲೀಡರ್ಗಳಾಗಿ ಮಾರ್ಪಾಡಾಗಿದ್ದಾರೆ. ಅವರು ಲೀಡರ್ ಆಗದೇ ಇದ್ದರೆ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: 'ರಾಜ್ಯದ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್ ಡೋಸ್ ಗುರಿ: 470ಕ್ಕೂ ಅಧಿಕ 'ನಮ್ಮ ಕ್ಲಿನಿಕ್' ಆರಂಭ'
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ಕೋವಿಡ್ ಪ್ರಭಾವ ಇನ್ನೂ ಇದೆ ಎಂದು ಡಬ್ಲ್ಯುಹೆಚ್ಒ ಹೇಳಿದೆ. ಹೀಗಾಗಿ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಳ್ಳಿ. ಪ್ರಧಾನಿ ಅವರು ಉಚಿತವಾಗಿ ಲಸಿಕೆ ನೀಡಲು ಹೇಳಿದ್ದಾರೆ. ಬೂಸ್ಟರ್ ಡೋಸ್ ಕೂಡಾ ಉಚಿತವಾಗಿ ಕೊಡಲಾಗುತ್ತಿದೆ. ಕೊರೊನಾ ಕಡಿಮೆ ಆಗಿದೆ ಎಂದು ನಿರ್ಲಕ್ಷ್ಯ ಬೇಡ. 75 ದಿನದೊಳಗೆ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವ ಗುರಿ ಇದೆ ಎಂದರು.