ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ವಿಧಾನಸಭೆಗೆ ಇಂದು ಬೆಳಗ್ಗೆ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 3 ಜಿಲ್ಲೆಗಳಲ್ಲಿ ಕೈಗೊಂಡಿದ್ದ ಜಿಲ್ಲಾ ಪ್ರವಾಸವನ್ನು ತಕ್ಷಣ ರದ್ದುಪಡಿಸಿದ್ದಾರೆ. ಚುನಾವಣಾ ಆಯೋಗವು ವೇಳಾಪಟ್ಟಿ ಘೋಷಣೆ ಮಾಡಿದ ಕ್ಷಣದಿಂದಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು ಮುಖ್ಯಮಂತ್ರಿಗಳು ಸರಕಾರದ ಹಲವಾರು ಯೋಜನೆಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಕೈಗೊಂಡಿದ್ದ ಧಾರವಾಡ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳ ಪ್ರವಾಸ ರದ್ದಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಸಿಎಂ ಕೆಲವು ಮಹತ್ವದ ಸರಕಾರಿ ಕಡತಗಳನ್ನು ವಿಲೇವಾರಿ ಮಾಡುವ ಕಾಯಕದಲ್ಲಿ ತೊಡಗಿದ್ದಾರೆಂದು ಹೇಳಲಾಗಿದೆ. ಇಂದು ಬೆಳಿಗ್ಗೆ ಧಾರವಾಡ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಚುನಾವಣೆ ಸಂಬಂಧ ಅವರು ಸಭೆ ನಡೆಸುವವರಿದ್ದರು.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಕುರಿತು ಸುದ್ದಿಗೋಷ್ಠಿ ಕರೆದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬೊಮ್ಮಾಯಿ ಮೂರು ಜಿಲ್ಲೆಗಳಲ್ಲಿ ಕೈಗೊಂಡಿದ್ದ ಪ್ರವಾಸ ರದ್ದುಪಡಿಸಿ ರಾಜಧಾನಿಯಲ್ಲಿಯೇ ಉಳಿದಿದ್ದಾರೆ. ಹೀಗಾಗಿ ಕೆಲವು ಅಗತ್ಯದ ಕಡತಗಳ ವಿಲೇವಾರಿ ಕಡೆ ಗಮನಹರಿಸಿದ್ದಾರೆಂದು ಹೇಳಲಾಗಿದೆ. ಮುಖ್ಯಮಂತ್ರಿಗಳು ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರ ಚುನಾವಣಾ ಆಯೋಗ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಹೊಂದಿದ್ದರು ಎನ್ನಲಾಗಿದೆ. ಆದರೆ ಆಯೋಗವು ಕೊನೆ ಕ್ಷಣದವರೆಗೂ ವೇಳಾಪಟ್ಟಿ ಘೋಷಣೆ ಬಗ್ಗೆ ಯಾವುದೇ ಸುಳಿವು ನೀಡದೆ ಗೌಪ್ಯತೆ ಕಾಪಾಡಿಕೊಂಡಿತ್ತು.
ಇದನ್ನೂ ಓದಿ: Explained: ಚುನಾವಣಾ ನೀತಿ ಸಂಹಿತೆ ಎಂದರೇನು? ತಿಳಿಯಬೇಕಾದ 10 ನಿಯಮಗಳು
ಮುಖ್ಯಮಂತ್ರಿಗಳು ಮಾತ್ರವಲ್ಲ, ಹಲವಾರು ಸಚಿವರು ಸಹ ವಿಧಾನಸೌಧಕ್ಕೆ ದೌಡಾಯಿಸಿ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದಾರೆಂದು ಹೇಳಲಾಗಿದೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಚಿವರಾದ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್ ಹಾಗು ತೋಟಗಾರಿಕೆ ಸಚಿವ ಮುನಿರತ್ನ ತರಾತುರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ತಮ್ಮ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ