ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಆರ್.ಟಿ.ನಗರ ತಮ್ಮ ನಿವಾಸದಲ್ಲಿ ಮಾತನಾಡುತ್ತ, ನಿಷೇಧದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ, ಸರ್ಕಾರಿ ನೌಕರರು ಬಹಳ ದಿನ ಹೇಳುತ್ತಿದ್ದರು. ಪಾಪ ಅವರೂ ಹೇಳುವುದರಲ್ಲೂ ಅರ್ಥ ಇದೆ. ಕೆಲವು ಹೆಣ್ಣುಮಕ್ಕಳದೆಲ್ಲ ಫೋಟೋ ತೆಗೆದು, ತೊಂದರೆ ಆಗಿತ್ತು. ಹೀಗಾಗಿ ಅವರು ಹೀಗೆ ಮಾಡಿದ್ರು. ಯಾರು ಏನಾದರೂ ಹೇಳಿಕೊಳ್ಳಲಿ, ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ನಿರ್ಬಂಧ ಹಾಕಬಾರದು. ಮೊದಲು ಯಾವ ರೀತಿ ಇತ್ತೋ, ಅದೇ ರೀತಿ ನಿಯಮ ಇರಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ವಿಶೇಷ ರ‍್ಯಾಲಿಗೆ ತೀರ್ಮಾನ: ಸರ್ಕಾರ ಒಂದು ವರ್ಷ ಪೂರೈಸಿದ್ದಕ್ಕೆ ದೊಡ್ಡ ಬಳ್ಳಾಪುರದಲ್ಲಿ ದೊಡ್ಡ ರ‍್ಯಾಲಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಇದೇ ವೇಲೆ ಸಿಎಂ ತಿಳಿಸಿದರು. ಸರ್ಕಾರಿ ಕಾರ್ಯಕ್ರಮ ಬೆಂಗಳೂರಲ್ಲಿ ಇರಲಿದೆ. ಪಕ್ಷದ ಕಾರ್ಯಕ್ರಮ ಮಾತ್ರ ದೊಡ್ಡಬಳ್ಳಾಪುರದಲ್ಲಿದೆ. ಮುಂಬರುವ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ.
ಶುಕ್ರವಾರ ಇಡೀ ದಿನ ಪ್ರಮುಖರ ಜೊತೆ ಚಿಂತನಾ ಸಭೆ ಆಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಪಕ್ಷ ಯಾವ ರೀತಿ ಸಮನ್ವಯತೆಯಿಂದ ಹೋಗಬೇಕು ಎಂಬ ಚರ್ಚೆ ನಡೆದಿದೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.
ಸಭೆ ನಡುವೆ ನಿನ್ನೆ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಾತಾಡಿದ್ದೇನೆ. ಅಲ್ಲಿನ ಸ್ಥಳೀಯ ನದಿಗಳ ಪ್ರವಾಹ, ಜನರ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ಆಶ್ರಯ ಕೇಂದ್ರಗಳನ್ನು ಕೂಡಲೇ ತೆರೆಯಬೇಕು, ಮನೆಗಳು ಬಿದ್ದಲ್ಲಿ ಪರಿಹಾರ ಕೊಡುವಂತೆ ಸೂಚಿಸಿದ್ದು, ಈಗಾಗಲೇ ಹಣ ಒದಗಿಸಲಾಗಿದೆ ಎಂದು ತಿಳಿಸಿದರು.
ಪರಿಹಾರ ಮೊತ್ತ ಹೆಚ್ಚಳ: ಮೂಲ ಸೌಕರ್ಯಕ್ಕಾಗಿ 500 ಕೋಟಿ ಒದಗಿಸಿದ್ದೇನೆ. ಮನೆಗಳನ್ನು ಕಟ್ಟಲು ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬೆಳೆ ಪರಿಹಾರಕ್ಕಿಂತ ಹೆಚ್ಚು ಮಾಡಿದ್ದೇವೆ. ಪ್ರವಾಹದ ಸಂದರ್ಭದಲ್ಲಿ ಯಾರು ತೊಂದರೆಗೀಡಾಗಿದ್ದಾರೆ, ಅವರ ನೆರವಿಗೆ ಸರ್ಕಾರ ಕೂಡಲೇ ಧಾವಿಸಲಿದೆ. ಆಮೇಲೆ ಸೂಕ್ತವಾದ ಪರಿಹಾರವನ್ನೂ ನಮ್ಮ ಸರ್ಕಾರ ನೀಡಲಿದೆ ಎಂದರು.
ಇದನ್ನೂ ಓದಿ: ಅಯ್ಯಪ್ಪ ಬೆಟ್ಟದಲ್ಲಿ ಬಿರುಕು: 80 ಕುಟುಂಬಗಳ 221 ಜನರ ಸ್ಥಳಾಂತರ