ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುತ್ತಿದ್ದು, ರಾಜ್ಯ ಬಿಜೆಪಿ ಪಾಳಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿದೆ.
ಮಧ್ಯಾಹ್ನ 1.20 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಪ್ರವಾಸ ಬೆಳೆಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ, ಸಂಜೆ ಕೇಂದ್ರದ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ನಾಳೆ ರಾತ್ರಿ ನವದೆಹಲಿಯ ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಶುಕ್ರವಾರ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಸೂಚಕರಾಗಿ ಸಹಿ ಮಾಡಲು ಸಿಎಂ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಮುಗಿದ ನಂತರ ಮತ್ತೆ ಕೇಂದ್ರದ ಕೆಲ ಸಚಿವರನ್ನು ಭೇಟಿಯಾಗಿ ಮಧ್ಯಾಹ್ನ 1.30 ರ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಸಂಪುಟ ಸರ್ಕಸ್: ದೆಹಲಿ ಪ್ರವಾಸದ ವೇಳೆ ನಾಳೆ ರಾತ್ರಿ ಸಿಎಂ ದೆಹಲಿಯಲ್ಲಿ ತಂಗಲಿದ್ದು, ಹೈಕಮಾಂಡ್ ನಾಯಕರೆಲ್ಲಾ ದೆಹಲಿಯಲ್ಲೇ ಇರಲಿದ್ದಾರೆ. ಈ ವೇಳೆ ಅವಕಾಶ ಸಿಕ್ಕಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಜೊತೆ ಸಿಎಂ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಸಚಿವ ಸ್ಥಾನಕ್ಕಾಗಿ ಕಾದು ಕಾದು ನಿರಾಶರಾಗಿರುವ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ಕುತೂಹಲ ಗರಿಗೆದರಿದೆ. ಸಂಪುಟ ವಿಸ್ತರಣೆಗೆ ಅನುಮತಿ ಸಿಗುತ್ತಾ, ಸಂಪುಟದಲ್ಲಿ ಅವಕಾಶ ಸಿಗುತ್ತಾ? ಎಂದು ಕಾತರದಿಂದ ಸಿಎಂ ದೆಹಲಿ ಪ್ರವಾಸವನ್ನು ಎದುರುನೋಡುತ್ತಿದ್ದಾರೆ.
ಇದನ್ನೂ ಓದಿ: ಎಲ್ಲಾ ನಿಮ್ಮ ಉಪಕಾರ ಸಾರ್.. ಉತ್ತರ ಭಾರತದಲ್ಲಿನ 'ಅಗ್ನಿ'ಪಥದಿಂದ ಪಾರಾಗಿ ಬಂದವರಿಂದ ಸಚಿವರಿಗೆ ಕೃತಜ್ಞತೆ