ಬೆಂಗಳೂರು : ಮಳೆ ಹಾನಿ ಹಾಗೂ ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರಿನಲ್ಲಿ ಮೂಲಸೌಕರ್ಯ ಸರಿಪಡಿಸುವ ಕೆಲಸ ನವೆಂಬರ್ ಒಳಗಾಗಿ ಮಾಡುತ್ತೇವೆ ಎಂದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ನಗರೋತ್ಥಾನ ಯೋಜನೆ ಅಡಿಯಲ್ಲಿ ಈಗಾಗಲೇ ಸುಮಾರು 6000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಕೆಲಸ ಪ್ರಾರಂಭವಾಗಿದೆ ಎಂದರು.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮತೀಯ ಆಧಾರದ ಬೆಳವಣಿಗೆ ಹಾಗೂ ಸಂಘರ್ಷದ ವಾತಾವರಣದಿಂದ ಬಂಡವಾಳ ಹೂಡಿಕೆಯ ಮೇಲೆ ಪರಿಣಾಮ ಬಿದ್ದಿಲ್ಲ. ಎಲ್ಲೂ ಯಾರೂ ಅಂತಹ ಪ್ರಶ್ನೆಯೇ ಕೇಳಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ಲುಲು ಗ್ರೂಪ್ ಮಾಲ್ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಈ ಹಿಂದೆ ಬಿಜೆಪಿಯಿಂದ ವ್ಯಕ್ತವಾಗಿದ್ದ ವಿರೋಧದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಲ್ ಮಾಡಿದ್ದಾರೆ. ನಿಯಮ ಏನು ಉಲ್ಲಂಘನೆ ಆಗಿದೆ ಎಂದು ನೋಡೋಣ. ಬಂಡವಾಳ ಹೂಡಿಕೆಗೆ ಏಕೆ ಬೇಡ ಎನ್ನಬೇಕು. ಹೂಡಿಕೆ ಯಾರೇ ಮಾಡಿದರೂ ನಿಯಮ ಪ್ರಕಾರ ಮಾಡಬೇಕು ಎಂದರು.
ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲ್ಲ : ವಿಧಾನಪರಿಷತ್, ರಾಜ್ಯಸಭೆ ಸೇರಿದಂತೆ ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ ಸಿಎಂ ಬೊಮ್ಮಾಯಿ, ರಾಜಕೀಯ ವಿಚಾರಗಳ ಬಗ್ಗೆ ಬೇರೆ ಸಂದರ್ಭದಲ್ಲಿ ಉತ್ತರ ನೀಡುತ್ತೇನೆ. ಆದರೆ, ಈಗ ಬೇಡ ಎಂದು ಹೇಳಿದರು. ಸಚಿವರಾದ ವಿ. ಸೋಮಣ್ಣ, ಸಿ. ಸಿ ಪಾಟೀಲ್, ಮುರುಗೇಶ್ ನಿರಾಣಿ, ಬಿ. ಸಿ ಪಾಟೀಲ್ ಮತ್ತಿತರರು ಹಾಜರಿದ್ದರು.
ಓದಿ: ನಾವ್ ಯಾವತ್ತೂ ನೆಹರು ಅವರನ್ನ ಮೋದಿ ಜೊತೆ ಕಂಪೇರ್ ಮಾಡೇ ಇಲ್ಲ: ಪ್ರಹ್ಲಾದ್ ಜೋಶಿ