ಬೆಂಗಳೂರು: ಚರಂಡಿ, ಒಳಚರಂಡಿ, ರಾಜಕಾಲುವೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದು, ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಲಿದ್ದೇವೆ. ಮುಂದಿನ ಮೂರು ನಾಲ್ಕು ವರ್ಷ ಬಜೆಟ್ನಲ್ಲಿ ಅನುದಾನ ಇಟ್ಟು ಕೆಲಸ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 68 ರ ಅಡಿ ನಡೆದ ಚರ್ಚೆಗೆ ಸರ್ಕಾರದಿಂದ ಉತ್ತರ ಕೊಡುವ ವೇಳೆ ಮಾತನಾಡಿದ ಅವರು, ಬೆಂಗಳೂರು ನಗರ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹಾಗಾಗಿ ಮೊದಲಿನ ರಾಜಕಾಲುವೆ ಸ್ವರೂಪ ಈಗ ಬದಲಾಗಿದೆ. ರಾಜಕಾಲುವೆ ಮೇಲಿನ ಒತ್ತಡ ಹೆಚ್ಚಾಗಿದೆ. ರಾಜಕಾಲುವೆಗೆ ಒಳಚರಂಡಿ ನೀರು ಹೋಗುತ್ತಿದೆ. ಬೆಂಗಳೂರಿನ ಎಲ್ಲ ಕೆರೆ ತುಂಬಿವೆ. ಇಲ್ಲಿನ ಬಹುತೇಕ ಕೆರೆಗಳಿಗೆ ಸೀವೇಜ್ ಗೇಟ್ ಇಲ್ಲ. ಹಲಸೂರು, ಸ್ಯಾಂಕಿಕೆರೆ ವ್ಯವಸ್ಥಿತವಾಗಿರುವ ಕಾರಣ ನೆರೆ ಬರಲ್ಲ. ಆದರೆ, ಇತರ ಕಡೆ ಆ ರೀತಿ ಇಲ್ಲ ಎಂದರು.
ಒತ್ತುವರಿ ತೆರವು ಮಾಡಿ ಕಾಲುವೆಗಳ ಮೂಲ ಸ್ವರೂಪಕ್ಕೆ ತರಬೇಕು. ಕೆರೆಗಳಿಗೆ ಸೀವೇಜ್ ಗೇಟ್ ಹಾಕಬೇಕು. ರಾಜಕಾಲುವೆ ಸಂಪೂರ್ಣ ಮಾಡಬೇಕು. ಹೊಸ ಕಾಲುವೆಗಳನ್ನೂ ಮಾಡಬೇಕು. ಬಿಬಿಎಂಪಿ, ಬಿಡಿಎ, ಬಿಎಂಆರ್ ನಂತರ ಗ್ರಾಮ ಪಂಚಾಯತ್ ಬರಲಿದೆ. ನೀರು ದಕ್ಷಿಣ ಪಿನಾಕಿನಿಗೆ ಹೋಗಿ ಕಾವೇರಿ ತಲುಪುವವರೆಗೂ ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ 1617 ಕೋಟಿ ಹಣ ರಾಜಕಾಲುವೆಗೆ ಕೊಡಲಾಗಿದೆ. ಮತ್ತೆ ಮೊನ್ನೆ 300 ಕೋಟಿ ಬಿಡುಗಡೆ ಮಾಡಲಾಗಿದೆ. 130 ಕಿ ಮೀ ರಾಜಕಾಲುವೆ ಮಾಡುತ್ತಿದ್ದೇವೆ. ಆದ್ಯತೆ ಮೇಲೆ ರಾಜಕಾಲುವೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಜನಸಂಖ್ಯೆಗೆ ತಕ್ಕಂತೆ ಯೋಜನೆ: ಚರಂಡಿ, ಒಳಚರಂಡಿ, ರಾಜಕಾಲುವೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದು, ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಲಿದ್ದೇವೆ. ಪ್ರಾಥಮಿಕ ಕಾಲುವೆ, ದ್ವಿತೀಯ ಹಂತದ ಕಾಲುವೆ ಬೇರೆ ಬೇರೆಯವರಿಂದ ಕೆಲಸ ಮಾಡಿಸಲಿದ್ದೇವೆ. ಮೂರ್ನಾಲ್ಕು ವರದಿ ಇವೆ. ಇಂದಿನ ಜನಸಂಖ್ಯೆಗೆ ತಕ್ಕಂತೆ ಯೋಜನೆ ರೂಪಿಸಲಾಗುತ್ತದೆ ಎಂದರು.
ಮಾಡಬಾರದ್ದನ್ನು ಮಾಡಿದ್ದಕ್ಕೆ ಹೀಗಾಗಿದೆ. ವೈಜ್ಞಾನಿಕವಾಗಿ ಎಲ್ಲವನ್ನು ಮಾಡಲಿದ್ದೇವೆ. ಮುಂದಿನ ಮೂರು ನಾಲ್ಕು ವರ್ಷ ಬಜೆಟ್ ನಲ್ಲಿ ಅನುದಾನ ಇಟ್ಟು ಕೆಲಸ ಮಾಡಲಿದ್ದೇವೆ ಎಂದರು.
ರಾಮನಗರಕ್ಕೆ ಜಿದ್ದಾಜಿದ್ದಿ ಪ್ರಾರಂಭ: ರಾಮನಗರ ಬಹಳ ಜನರ ಆಕರ್ಷಕ ಸ್ಥಳ. ಪ್ರಥಮ ಬಾರಿ ರಾಮನಗರಕ್ಕೆ ಜಿದ್ದಾಜಿದ್ದಿ ಪ್ರಾರಂಭವಾಗಿದೆ. ರಾಮನಗರ ಹಾಗೆಲ್ಲಾ ಎಲ್ಲರನ್ನೂ ಸ್ವೀಕರಿಸಲ್ಲ. ಅಲ್ಲಿ ನಿಲ್ಲುವವರೆಲ್ಲ ಸಿಎಂ ಆಗುತ್ತಾರೆ ಅಂತಾ ಹೋದರೆ ಶಾಸಕರೂ ಆಗಲ್ಲ. ನೀವು ನಿಲ್ಲಬೇಡಿ ಎಂದು ಮುಖ್ಯಮಂತ್ರಿ ಆಗಬೇಕು ಎನ್ನುವವರೆಲ್ಲಾ ರಾಮನಗರದಲ್ಲಿ ನಿಲ್ಲಿ ಎಂದು ಹೇಳಿಕೆ ನೀಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರಿಗೆ ಸಲಹೆ ನೀಡಿದರು.
ಓದಿ: ಧನವಿನಿಯೋಗ ವಿಧೇಯಕ ಅಂಗೀಕಾರ : 14,762 ಕೋಟಿ ರೂ ಪೂರಕ ಅಂದಾಜಿಗೆ ಸದನ ಒಪ್ಪಿಗೆ