ಬೆಂಗಳೂರು: ಸಿಎಂ ಬೊಮ್ಮಾಯಿ ತಮ್ಮ ಆಡಳಿತಾವಧಿಯ ಕೊನೆಯ ಬಜೆಟ್ ಮಂಡಿಸಲು ಸಿದ್ಧತೆ ಪ್ರಾರಂಭಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಬಹುತೇಕ ಚುನಾವಣಾ ಬಜೆಟ್ಗೆ ತಯಾರಿ ನಡೆಸುತ್ತಿರುವ ಸಿಎಂ ಪೂರ್ಣಪ್ರಮಾಣದ ಹಾಗೂ ಹೆಚ್ಚುವರಿ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ.
ಸಿಎಂ ಬೊಮ್ಮಾಯಿ ತಮ್ಮ ಅಧಿಕಾರಾವಧಿಯ ಎರಡನೇ ಬಜೆಟ್ ಮಂಡನೆಗೆ ತಯಾರಿ ಆರಂಭಿಸಿದ್ದಾರೆ. 2023-24ನೇ ಸಾಲಿನ ಬಜೆಟ್ಗೆ ಅಧಿಕಾರಿಗಳ ಜೊತೆ ಸಭೆ ಆರಂಭಿಸಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಇತ್ತ ಅಧಿಕಾರಿಗಳ ಜೊತೆ ಬಜೆಟ್ ಪೂರ್ವತಯಾರಿ ಸಭೆಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ. 2022-23 ಸಾಲಿನಲ್ಲಿ 2.7 ಲಕ್ಷ ಕೋಟಿ ಆಯವ್ಯಯ ಮಂಡಿಸಿದ್ದ ಸಿಎಂ ಬೊಮ್ಮಾಯಿ 3 ಲಕ್ಷ ಕೋಟಿಗೂ ಅಧಿಕ 2023-24 ಸಾಲಿನ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರಕ್ಕೆ ಇದು ನಿರ್ಣಾಯಕ ಆಯವ್ಯಯ ಆಗಿದೆ. ಜನಪ್ರಿಯ ಘೋಷಣೆ, ಚುನಾವಣಾ ಲಾಭ ತರುವ ಆಯವ್ಯಯ ಮಂಡಿಸಲು ಸಿಎಂ ಬೊಮ್ಮಾಯಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿಯ ಬಜೆಟ್ ಬಹುತೇಕ ಚುನಾವಣಾ ಬಜೆಟ್ ಆಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇತ್ತ ರಾಜ್ಯ ಕೋವಿಡ್ ಲಾಕ್ ಡೌನ್ ನಿಂದ ಚೇತರಿಕೆ ಕಾಣುತ್ತಿದ್ದು, ಗುರಿ ಮೀರಿ ಆದಾಯ ಸಂಗ್ರಹ ಸಿಎಂ ಬೊಮ್ಮಾಯಿ ನಿಟ್ಟುಸಿರು ಬಿಡುವಂತಾಗಿದೆ. ಆದಾಯ ಸಂಗ್ರಹ ಉತ್ತಮವಾಗಿರುವುದರಿಂದ ಚುನಾವಣಾ ಬಜೆಟ್ ಮಂಡನೆಗೆ ಹಾದಿ ಸುಗಮಗೊಳಿಸಿದೆ.
ಹೆಚ್ಚುವರಿ ಬಜೆಟ್ ಮಂಡನೆಗೆ ತಯಾರಿ: ಈ ಬಾರಿ ಸಿಎಂ ಬೊಮ್ಮಾಯಿ ಹೆಚ್ಚುವರಿ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಲಾಕ್ಡೌನ್ ಹಿನ್ನೆಲೆ ಆದಾಯ ಕೊರತೆಯ ಬಜೆಟ್ ಮಂಡನೆಯಾಗಿತ್ತು. ಈ ಬಾರಿ ಹೆಚ್ಚುವರಿ ಆಯವ್ಯಯ ಮಂಡನೆ ಮಾಡಲು ಸಿಎಂ ಸಿದ್ಧತೆ ನಡೆಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ರಾಜ್ಯದ ಆರ್ಥಿಕತೆ ಚೇತರಿಕೆ ಕಂಡಿದ್ದು, ತೆರಿಗೆ ಮೂಲಗಳು ಗುರಿ ಮೀರಿ ಆದಾಯ ಸಂಗ್ರಹ ಮಾಡುತ್ತಿವೆ. 2022-23 ಸಾಲಿನ ಮೊದಲಾರ್ಧ ವರ್ಷದಲ್ಲಿ ರಾಜ್ಯದ ಬೊಕ್ಕಸಕ್ಕೆ 1 ಲಕ್ಷ ಕೋಟಿಗೂ ಅಧಿಕ ರಾಜಸ್ವ ಸ್ವೀಕೃತಿಯಾಗಿದೆ. ಇದರಲ್ಲಿ ಕೇಂದ್ರದ ಸಹಾಯಾನುದಾನ, ತೆರಿಗೆ ಪಾಲು ಸೇರಿದೆ. ಇತ್ತ ಜಿಎಸ್ ಟಿ ಸಂಗ್ರಹ ನಿರೀಕ್ಷೆಗೂ ಮೀರಿ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹಿಸುವ ಎಲ್ಲ ಇಲಾಖೆಗಳು ಬಜೆಟ್ ಗುರಿ ಮೀರಿ ಆದಾಯ ಸಂಗ್ರಹಿಸುತ್ತಿರುವುದು ಸಿಎಂ ಬೊಮ್ಮಾಯಿ ಅವರನ್ನು ನಿರಾಳರನ್ನಾಗಿಸಿದೆ.
ಹೀಗಾಗಿ ಕಳೆದೆರಡು ವರ್ಷಗಳಿಂದ ಆದಾಯಗಿಂತ ವೆಚ್ಚವೇ ಹೆಚ್ಚಾಗಿದ್ದ ಕಾರಣ ಆದಾಯ ಕೊರತೆಯ ಬಜೆಟ್ ಮಂಡನೆಯಾಗಿತ್ತು. ಆದರೆ, ಈ ಬಾರಿ ಭರಪೂರ ತೆರಿಗೆ ಸಂಗ್ರಹವಾಗುತ್ತಿರುವುದರಿಂದ ವೆಚ್ಚಕ್ಕಿಂತ ಆದಾಯ ಹೆಚ್ಚಿರಲಿದೆ. ಆದಾಯ ಕ್ರೋಢೀಕರಣ ಸಹಜ ಸ್ಥಿತಿಗೆ ಬಂದಿರುವ ಕಾರಣ ಈ ಬಾರಿ ಹೆಚ್ಚುವರಿ ಆದಾಯ ಬಜೆಟ್ ಮಂಡನೆಯಾಗಲಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಜನಪ್ರಿಯ ಬಜೆಟ್ ಗೆ ತಯಾರಿ: ಚುನಾವಣಾ ವರ್ಷ ಆಗಿರುವುದರಿಂದ ಸಿಎಂ ಬೊಮ್ಮಾಯಿ ಈ ಬಾರಿ ಜನಪ್ರಿಯ ಆಯವ್ಯಯ ಮಂಡಿಸಲು ಮುಂದಾಗಿದ್ದಾರೆ. ಏಪ್ರಿಲ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಜನಪ್ರಿಯ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಬಡವರಿಗೆ, ಮಹಿಳೆಯರಿಗೆ ಹಾಗೂ ರೈತರನ್ನು ಕೇಂದ್ರೀಕರಿಸಿ ಹೊಸ ಯೋಜನೆಗಳನ್ನು ಘೋಷಿಸಲು ಸಿಎಂ ಬೊಮ್ಮಾಯಿ ತಯಾರಿ ನಡೆಸುತ್ತಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ರೈತರಿಗೆ ಡೀಸೆಲ್ ಸಹಾಯಧನ ವಿಸ್ತರಿಸುವ ಘೋಷಣೆಯನ್ನು ಈ ಬಾರಿಯ ಬಜೆಟ್ ನಲ್ಲಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಸಾಂಪ್ರದಾಯಿಕ ವೃತ್ತಿ ಮಾಡಲು ಇಚ್ಚಿಸುವವರಿಗೆ 50,000 ರೂ. ಧನಸಹಾಯ ನೀಡಲು ಸಿಎಂ ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ. ಆ ಮೂಲಕ ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆ ರೂಪಿಸಲಿದ್ದಾರೆ ಎನ್ನಲಾಗಿದೆ. ಉಳಿದಂತೆ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ಏಳನೇ ವೇತನವನ್ನು ಘೋಷಿಸುವ ಚಿಂತನೆ ಇದೆ.
ಆರ್ಥಿಕ ಇಲಾಖೆಯ ಬಜೆಟ್ ಸಂಬಂಧಿತ ಸೂಚನೆಗಳೇನು?: ಈಗಾಗಲೇ ಆರ್ಥಿಕ ಇಲಾಖೆ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿ, ಅಳೆದು ತೂಗಿ ವೆಚ್ಚ ಅಂದಾಜನ್ನು ಮಾಡುವಂತೆ ಸೂಚನೆ ನೀಡಿದೆ. ಏಕ ಉದ್ದೇಶದ ಯೋಜನೆಗಳನ್ನು ವಿಲೀನಗೊಳಿಸಿ ಒಂದು ಯೋಜನೆಯಾಗಿ ಪ್ರಸ್ತಾವನೆ ಕಳುಹಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ವೆಚ್ಚಗಳ ಅಂದಾಜನ್ನು ಜಾಗರೂಕತೆಯಿಂದ ಮಾಡುವಂತೆ ತಿಳಿಸಿದೆ. ಯಾವುದೇ ಗೊಂದಲ, ದುಂದು ವೆಚ್ಚ ಇಲ್ಲದಂತೆ ನಿಖರ ವೆಚ್ಚ ಅಂದಾಜನ್ನು ಕಳುಹಿಸಿಕೊಡುವಂತೆ ಆರ್ಥಿಕ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ರಾಜಕೀಯಕ್ಕೆ ಕುಟುಂಬದವರನ್ನು ಕರೆತರದಿರಲು ನಿಮ್ಮಿಂದ ಸಾಧ್ಯವೇ? ಎಚ್ಡಿಕೆಗೆ ಸವಾಲೊಡ್ಡಿದ ಪ್ರಹ್ಲಾದ್ ಜೋಶಿ