ನವದೆಹಲಿ/ಬೆಂಗಳೂರು: ನವದೆಹಲಿ ಪ್ರವಾಸದ 2ನೇ ದಿನವಾದ ಇಂದು ಕೇಂದ್ರ ಸಚಿವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮ್ಯಾರಥಾನ್ ಸಭೆ ನಡೆಸಿದ್ದಾರೆ. ಸಂಸದೀಯ ವ್ಯವಹಾರ, ಆರ್ಥಿಕ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಯೋಜನೆಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
ಬೆಳಗ್ಗೆ ಅಂತಾರಾಜ್ಯ ಜಲ ವ್ಯಾಜ್ಯ ಸಂಬಂಧ ಕಾನೂನು ತಜ್ಞರ ತಂಡದ ಜೊತೆ ಸಭೆ ಮುಗಿಯುತ್ತಿದ್ದಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಕೇಂದ್ರದ ಯೋಜನೆಗಳ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುವ ಕುರಿತು ಮಾತುಕತೆ ನಡೆಸಿದರು.
ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಹಣಕಾಸು ಇಲಾಖೆ ವ್ಯಾಪ್ತಿಯ ಇತಿಮಿತಿಯಲ್ಲಿನ ಯೋಜನೆಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.
ಬಳಿಕ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿದ ಸಿಎಂ ಅವರೊಂದಿಗೆ ಮಾತುಕತೆ ನಡೆಸಿದರು. ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ಲಸಿಕೆ ಪೂರೈಸುವಂತೆ ಮನವಿ ಮಾಡಿದರು. ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.
ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಡಾ. ಕೆ. ಸುಧಾಕರ್, ಸಂಸದ ಶಿವಕುಮಾರ್ ಉದಾಸಿ, ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.
ಓದಿ: Mysore Gangrape Case: ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿ ಹೋಗಬಾರದಿತ್ತು ಎಂದ ಗೃಹ ಸಚಿವ ಜ್ಞಾನೇಂದ್ರ!