ಬೆಂಗಳೂರು: ದೃಷ್ಟಿ ದೋಷ, ಮೆದುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಹಸುಗೂಸಿನ ಚಿಕಿತ್ಸೆಗಾಗಿ ನೆರವಿನ ನಿರೀಕ್ಷೆ ಹೊತ್ತು ಸಿಎಂ ಮನೆ ಮುಂದೆ ನಿಂತಿದ್ದ ಮಹಿಳೆಯ ಕಣ್ಣೀರಿಗೆ ಕಡೆಗೂ ಬೆಲೆ ಸಿಕ್ಕಿದೆ. ಕಂದಮ್ಮನ ಉಚಿತ ಚಿಕಿತ್ಸೆಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ ಬೆಂಗಳೂರಿನ ಆರ್.ಟಿ.ನಗರ ನಿವಾಸಕ್ಕೆ ಆಗಮಿಸಿದಾಗ ಹಸುಗೂಸು ಎತ್ತಿಕೊಂಡು ಕಾಯುತ್ತಿದ್ದ ಶಂಕ್ರಮ್ಮ ಎನ್ನುವ ಮಹಿಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನ ಸೆಳೆದಳು. ಆಕೆಯ ಸಮಸ್ಯೆಯ ಕುರಿತು ವಿಚಾರಿಸಿದಾಗ, ಮಗು ಕೃಷ್ಣವೇಣಿ ದೃಷ್ಟಿ ದೋಷ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ, ತಾವು ಅಷ್ಟು ಆರ್ಥಿಕ ಶಕ್ತರಲ್ಲ. ಹಾಗಾಗಿ, ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶಂಕ್ರಮ್ಮನ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಮಗು ಕೃಷ್ಣವೇಣಿಯ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದರು. ಇದಾಗಿ ಎರಡು ಗಂಟೆಯೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಪತ್ರ ಬರೆದು, ಕೃಷ್ಣವೇಣಿಯ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದರು. ಮಗುವಿಗೆ ಸಂಪೂರ್ಣವಾದ ಚಿಕಿತ್ಸೆ ನೀಡಿದ ನಂತರ ಸರ್ಕಾರಕ್ಕೆ ಬಿಲ್ಗಳನ್ನು ಸಲ್ಲಿಸುವಂತೆ ಪತ್ರದಲ್ಲಿ ಎಸ್ಡಿಎಂ ಆಸ್ಪತ್ರೆಗೆ ಸೂಚಿಸಿದರು.
ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳ ಮಾತು ಕೆಲವೇ ಗಂಟೆಗಳಲ್ಲಿ ಅಧಿಕೃತ ಭರವಸೆಯಾಗಿ ಈಡೇರಿಕೆಯೂ ಆಗಿದ್ದು, ಮುಖ್ಯಮಂತ್ರಿಗಳ ಸ್ಪಂದನೆಗೆ ಮಗುವಿನ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಎನ್ಡಿಆರ್ಎಫ್ ನಿಯಮ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪ ಹಾನಿಗೆ ಕೂಡಲೇ ಪರಿಹಾರ ನೀಡಿ'